ER NEWS

News Subject: 
ಸಾವಿರಾರು ಭಕ್ತರ ಉದ್ಘೋಷದ ನಡುವೆ ಉಕ್ಕಿದ ಜೀವನದಿ ಕಾವೇರಿ
Upload Image: 
Body: 

ನಾಡಿನ ಜೀವನದಿ, ಕೊಡವರ ಅಧಿವೇವತೆ ಪುರಾಣ ಪ್ರಸಿದ್ಧ ಕಾವೇರಿ ಇಂದು ಮಧ್ಯಾಹ್ನ ಸಾವಿರಾರು ಭಕ್ತರ ಉದ್ಘೋಷದ ನಡುವೆ ಉಕ್ಕಿ ಹರಿದಾಗ ಜನ ಸ್ತೋಮ ಪುಳಕದಿಂದ ರೋಮಾಂಚನಗೊಂಡಿತು. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಉಗಮಸ್ಥಾನವಾದ ತಲಕಾವೇರಿಯಲ್ಲಿ ರುವ ಬ್ರಹ್ಮ ಕುಂಡಿಕೆಯಲ್ಲಿ ಇಂದು ಮಧ್ಯಾಹ್ನ 12.33ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಜೀವನದಿ ಕಾವೇರಿ ಉಕ್ಕಿ ಹರಿದಳು. ಪ್ರತಿ ವರ್ಷದಂತೆ ಈ ವರ್ಷವೂ ಕೊಡವರ ಸಾಂಪ್ರದಾಯಿಕ ಪೂಜಾ-ಕೈಂಕರ್ಯಗಳು ನೆರವೇರಿದ ಬೆನ್ನಲ್ಲೇ ತೀರ್ಥೋದ್ಭವವಾಯಿತು.

ರಾಜ್ಯ ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಹರಾಷ್ಟ್ರಗಳಿಂದಲೂ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಂತೋಷದಿಂದ ಮುನ್ನುಗ್ಗಿ ಕಾವೇರಿ ತೀರ್ಥವನ್ನು ಪ್ರೋಕ್ಷಿಸಿಕೊಂಡು ಪುನೀತರಾದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಕಾವೇರಿ ಮಾತೆಯ ದರ್ಶನ ಪಡೆದರು.
ವರ್ಷಕ್ಕೊಮ್ಮೆ ನಡೆಯುವ ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಸಾಲಿನಲ್ಲಿ ನೂಕು ನುಗ್ಗಲು ಉಂಟಾದಾಗ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಯಂತ್ರಿಸಲು ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಪ್ರದೇಶದಲ್ಲಿ 40 ಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಈ ಸಂದರ್ಭ ಅನೇಕ ಜನ ಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಸ್ತುವಾರಿ ವಹಿಸಿದ್ದರು.

Reach Count: 
1