Kshetra Samachara

Local News Subject: 
ಮಂಗಳೂರು: ಅಕ್ರಮ ನೆಲಸಿರುವ ಶ್ರೀಲಂಕಾ ಪ್ರಜೆಗಳ ಪ್ರಕರಣ; ಎನ್ಐಎ ಮೂಲಕ ತನಿಖೆ
City: 
Udupi
Mangalore
Category: 
Law and Order
Body: 

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣವು ದೇಶದ ಆಂತರಿಕ ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಕೇಂದ್ರದ ಗೃಹ ಇಲಾಖೆ, ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಮೂಲಕ ತನಿಖೆ ನಡೆಸಬೇಕೆಂದು ಆದೇಶಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಈ ಪ್ರಕರಣದ ಕಡತವನ್ನು ಡಿಎಸ್ಪಿ ರ‍್ಯಾಂಕ್ ನ ಅಧಿಕಾರಿಯೋರ್ವರು ಬಂದು, ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತನಿಖೆಗೆ ಪೂರಕವಾಗಿ ಸ್ಥಳೀಯವಾಗಿ ಅಗತ್ಯ ಅಧಿಕಾರಿಗಳು, ಸಿಬ್ಬಂದಿ ವಾಹನಗಳು ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಮಾಡಬೇಕೆಂದು ನಮ್ಮ ಕೇಂದ್ರ ಕಚೇರಿಯಿಂದ ನಿರ್ದೇಶನ ಬಂದಿದೆ. ಆ ಪ್ರಕಾರ ಎನ್ಐಎ ಅಧಿಕಾರಿಗಳು ತನಿಖೆಗೆ ಬಂದಾಗ ಎಲ್ಲ ರೀತಿಯಲ್ಲೂ ಸಹಕಾರ ನೀಡಲಾಗುತ್ತದೆ‌ ಎಂದು ಪೊಲೀಸ್ ಕಮಿಷನರ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ತಿಂಗಳು 38 ಶ್ರೀಲಂಕಾ ಪ್ರಜೆಗಳನ್ನು ಮಾನವ ಕಳ್ಳ ಸಾಗಣೆ, ಪಾಸ್ ಪೋರ್ಟ್ ಕಾಯ್ದೆ ವಂಚನೆ, ಅಕ್ರಮ ವಲಸೆ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಬಗ್ಗೆ ಕೇಂದ್ರ ಕಚೇರಿಯಿಂದ ಬಂದಿರುವ ನಿರ್ಧಿಷ್ಟ ಮಾಹಿತಿ ಹಿನ್ನೆಲೆಯಲ್ಲಿ ಅವರ ಬಂಧನವಾಗಿತ್ತು. ಅವರೀಗ ನ್ಯಾಯಾಂಗ‌ ಬಂಧನದಲ್ಲಿದ್ದಾರೆ ಎಂದು ಶಶಿಕುಮಾರ್ ಎನ್ ಹೇಳಿದರು.

Reach Count: 
7414
Show Detail Screen Advertisement: 
Yes