Kshetra Samachara

Local News Subject: 
ರಾಷ್ಟ್ರಧ್ವಜದ ಬಟ್ಟೆ ನೇಯುತ್ತಿದ್ದೇವೆಂಬ ಹೆಮ್ಮೆ ನಮಗಿದೆ: ನೇಕಾರರಿಗೆ ಬೇಕು ಸರ್ಕಾರದ ಸೌಲಭ್ಯ
City: 
Hubballi-Dharwad
Gadag
Category: 
Articles
Body: 

ಪಬ್ಲಿಕ್ ನೆಕ್ಸ್ಟ್ ವಿಶೇಷ

ಧಾರವಾಡ: ತಾಲೂಕಿನ ಗರಗ ಗ್ರಾಮ ಧಾರವಾಡ ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ಧಿ ಪಡೆದ ಗ್ರಾಮ. ಸುಮಾರು 15 ರಿಂದ 16 ಸಾವಿರ ಜನಸಂಖ್ಯೆ ಇರುವ ಈ ಗ್ರಾಮ ಪವಾಡ ಪುರುಷ ಮಡಿವಾಳಪ್ಪನವರ ಐಕ್ಯ ಸ್ಥಳವೂ ಹೌದು. ಇದೊಂದೇ ಕಾರಣಕ್ಕೆ ಗರಗ ಗ್ರಾಮ ಪ್ರಸಿದ್ಧಿ ಪಡೆದಿಲ್ಲ. ನಮ್ಮ ರಾಷ್ಟ್ರ ಧ್ವಜ ನಿರ್ಮಾಣಕ್ಕೆ ಖಾದಿ ಬಟ್ಟೆ ಸಿದ್ಧಪಡಿಸಿಕೊಡುವುದಕ್ಕಾಗಿ ಈ ಗ್ರಾಮ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿದೆ.

ಹೌದು! ಈ ಗ್ರಾಮದಲ್ಲಿ 1988-89ರಲ್ಲಿ ನೋಂದಣಿಗೊಂಡ ಕ್ಷೇತ್ರೀಯ ಸೇವಾ ಸಂಘದಿಂದ ರಾಷ್ಟ್ರಧ್ವಜಕ್ಕಾಗಿ ಖಾದಿ ಬಟ್ಟೆಯನ್ನು ನೇಯ್ದುಕೊಡುವ ಕೆಲಸ ನಡೆಯುತ್ತ ಬಂದಿದೆ. ಎರಡು ಖಾದಿ ಕೇಂದ್ರಗಳು ಈ ಗ್ರಾಮದಲ್ಲಿದ್ದು, ಎರಡೂ ಕೇಂದ್ರಗಳಲ್ಲಿ ರಾಷ್ಟ್ರಧ್ವಜಕ್ಕಾಗಿ ಖಾದಿ ಬಟ್ಟೆ ತಯಾರಿಸಲಾಗುತ್ತಿದೆ.
ನೇಯುವವರ ಸಂಖ್ಯೆ ಕಡಿಮೆಯಾಗುತ್ತಿದೆ: ಕೇಂದ್ರ ಪ್ರಾರಂಭದ ಹಂತದಲ್ಲಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿತ್ತು. ಡಾ.ವಿಷ್ಣುವರ್ಧನ್ ಅವರ ಅಭಿನಯದ ವೀರಪ್ಪ ನಾಯ್ಕ್ ಸಿನಿಮಾ ಕೂಡ ಈ ಕೇಂದ್ರಗಳಲ್ಲೇ ಚಿತ್ರೀಕರಣಗೊಂಡಿತ್ತು. ಅಂದಿನ ಸಂದರ್ಭದಲ್ಲಿ ಸಾವಿರಾರು ಮಂದಿ ಕೇಂದ್ರಗಳಲ್ಲಿ ದುಡಿಯುತ್ತಿದ್ದರು. ಆದರೆ, ಬದಲಾದ ವಿದ್ಯಮಾನಗಳಲ್ಲಿ ಹಾಗೂ ಹೆಚ್ಚು ಸಂಬಳ ಸಿಗುವ ಕೆಲಸಗಳತ್ತ ಮುಖ ಮಾಡಿದ ಜನತೆಯಿಂದಾಗಿ ಇಂದು ಈ ಕೇಂದ್ರಗಳಲ್ಲಿ ಕೇವಲ ಬೆಳಣಿಕೆಯಷ್ಟೇ ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬಹುಪಾಲು ಮಹಿಳಾ ಉದ್ಯೋಗಿಗಳೇ ಇದ್ದಾರೆ ಎನ್ನುವುದು ವಿಶೇಷ.

ಮುಂಬೈಗೆ ಹೋಗುವ ಬಟ್ಟೆ: ಗರಗ ಗ್ರಾಮದಲ್ಲಿ ರಾಷ್ಟ್ರಧ್ವಜಕ್ಕಾಗಿ ಸಿದ್ಧವಾಗುವ ಖಾದಿ ಬಟ್ಟೆ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಧ್ವಜವಾಗಿ ಹೊರಹೊಮ್ಮಲು ಮುಂಬೈಗೆ ರಫ್ತಾಗುತ್ತದೆ. ಅಲ್ಲಿ ಆ ಬಟ್ಟೆಗೆ ಬಣ್ಣ ಸೇರಿಸಲಾಗುತ್ತದೆ.

ಸದ್ಯ ಗ್ರಾಮದ ಎರಡೂ ಕೇಂದ್ರಗಳಲ್ಲಿ ಸುಮಾರು 40 ರಿಂದ 50 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇವರು ಈ ಉದ್ಯೋಗ ಬಿಟ್ಟು ಬೇರೆ ಉದ್ಯೋಗದತ್ತ ಮುಖ ಮಾಡಲಿಲ್ಲ. ಸದ್ಯ ಇವರು ಒಂದು ತಾಗೆ ನೇಯ್ದರೆ 400 ರೂಪಾಯಿ ನೀಡಲಾಗುತ್ತಿದೆ. ಇಂಥವುಗಳು ವಾರದಲ್ಲಿ ಎರಡು ತಾಗೆಗಳಷ್ಟೇ ಆಗುತ್ತವೆ. ಇದೇ ನಮ್ಮ ಜೀವನೋಪಾಯಕ್ಕಾಗುತ್ತದೆ. ತುಟ್ಟಿ ದಿನಮಾನದಲ್ಲಿ ಇಷ್ಟು ವೇತನ ಸಾಕಾಗುವುದಿಲ್ಲ. ಮೊದಲಿನಿಂದಲೂ ಈ ಉದ್ಯೋಗ ನಮ್ಮನ್ನು ಕೈಹಿಡಿದಿದೆ. ಅಲ್ಲದೇ ರಾಷ್ಟ್ರಧ್ವಜಕ್ಕಾಗಿ ನಾವು ಬಟ್ಟೆ ನೇಯುತ್ತಿದ್ದೇವೆ ಎಂಬ ಹೆಮ್ಮೆ ನಮಗೆ ಇರುವುದರಿಂದ ಈ ಕೆಲಸವನ್ನು ಇನ್ನೂ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಪಬ್ಲಿಕ್ ನೆಕ್ಸ್ಟ್ ಗೆ ಮಹಿಳಾ ಉದ್ಯೋಗಿಯೊಬ್ಬರು ತಿಳಿಸಿದರು.

ಲಡಿ ರೂಪದಲ್ಲಿ ಬರುವ ಖಾದಿ ನೂಲನ್ನು ಅಲ್ಲೇ ಇರುವ ಮಹಿಳಾ ಉದ್ಯೋಗಿಗಳು ಮಶಿನ್‍ನಲ್ಲಿ ದಾರದ ರೂಪದಲ್ಲಿ ಪರಿವರ್ತನೆ ಮಾಡುತ್ತಾರೆ. ನಂತರ ನೇಯುವವರು ಆ ದಾರವನ್ನು ಬಟ್ಟೆ ಹೆಣೆಯಲು ಬಳಕೆ ಮಾಡಿಕೊಳ್ಳುತ್ತಾರೆ.
ಈ ಗ್ರಾಮದಲ್ಲಿ ಇರುವ ಖಾದಿ ಕೇಂದ್ರಗಳಿಂದಾಗಿ ಗ್ರಾಮ ಪ್ರಸಿದ್ಧಿ ಪಡೆದಿದೆ. ಆದರೆ, ಅಲ್ಲಿ ದುಡಿಯುತ್ತಿದ್ದ ಅನೇಕ ಜನ ಸಂಬಳ ಸಾಕಾಗದೇ ಕೆಲಸ ಬಿಟ್ಟು ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ. ರಾಷ್ಟ್ರದ ಹೆಮ್ಮೆಯ ಧ್ವಜಕ್ಕೆ ಬಟ್ಟೆ ತಯಾರಿಸಿಕೊಡುವ ಇವರಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಿದೆ. ಆ ಮೂಲಕ ಅವರಿಗೂ ಒಂದು ಗೌರವ ಸಲ್ಲಿಸುವ ಕೆಲಸವಾಗಬೇಕಿದೆ. ಇದೇ ರೀತಿ ಈ ಖಾದಿ ಬಟ್ಟೆ ನೇಯುವ ನೇಕಾರರನ್ನು ಸರ್ಕಾರ ನಿರ್ಲಕ್ಷಿಸಿದರೆ, ಇವರೂ ಕೂಡ ಬೇರೆ ಉದ್ಯೋಗದತ್ತ ಮುಖ ಮಾಡದೇ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ.

Reach Count: 
2