Kshetra Samachara

Local News Subject: 
ಧಾರವಾಡ: ಬಾಬಾಗೌಡ ನೇತೃತ್ವದಲ್ಲಿ ಸಭೆ, ಪ್ರತಿಭಟನೆ: ರೈತರ ಬೇಡಿಕೆ ಈಡೇರಿಸಲು ಹಕ್ಕೊತ್ತಾಯ
City: 
Hubballi-Dharwad
Gadag
Upload Image: 
Category: 
Law and Order
Others
Body: 

ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ಜರುಗಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಸರ್ಕಾರಕ್ಕೆ ಪ್ರಮುಖ ಐದು ಹಕ್ಕೊತ್ತಾಯಗಳನ್ನು ಮಾಡಲಾಯಿತು.
ರಾಜ್ಯ ಹಿರಿಯ ವಕ್ತಾರ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕವಿಸಂನಲ್ಲಿ ಜರುಗಿದ ಈ ಸಭೆಯಲ್ಲಿ ಪ್ರಮುಖ ವಿಷಯ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ರೈತರ ವಿವಿಧ ಬೇಡಿಕೆಗಳನ್ನು ಇತ್ಯರ್ಥಪಡಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.

ರಾಜ್ಯದ ಬಹುತೇಕ ರೈತರ ಹೊಲಗಳಿಗೆ ದಾರಿ ಸಂಪರ್ಕ ಇಲ್ಲದೇ ಬಿತ್ತನೆ ಕಷ್ಟಕರವಾಗಿದ್ದು, ಈ ಬಗ್ಗೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ದಾರಿ ವಿಷಯವಾಗಿ ವಿಶೇಷ ಕಾನೂನು ರಚಿಸಿ ತಹಶೀಲ್ದಾರರಿಗೆ ಅಧಿಕಾರ ಕೊಡಬೇಕು. ಪ್ರತಿ 30 ವರ್ಷಕ್ಕೊಮ್ಮೆ ಸರ್ವೇ ಮಾಡಿ ಹೊಸ ಪಹಣಿ ಒದಗಿಸಬೇಕೆಂಬ ನಿಯಮವಿದೆ. ಇದರ ಅನ್ವಯ ರಾಜ್ಯದ ಎಲ್ಲಾ ಜಮೀನುಗಳನ್ನು ಸರ್ವೇ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಸರ್ಕಾರವೇ ಎಲ್ಲಾ ಬೆಳೆಗಳನ್ನು ನೇರವಾಗಿ ಖರೀದಿಸಬೇಕು ಎಂದು ಆಗ್ರಹಿಸಲಾಯಿತು.

ಧಾರವಾಡ ಜಿಲ್ಲೆಯ ಹಿರೇಮಲ್ಲಿಗವಾಡ ಮತ್ತು ಚಿಕ್ಕಮಲ್ಲಿಗವಾಡ ಗ್ರಾಮದ ರೈತರ ಜಮೀನುಗಳನ್ನು ಗೃಹ ಮಂಡಳಿ ಅವರು ನಿವೇಶನಗಳನ್ನು ನಿರ್ಮಿಸಲು ರೈತರಿಂದ ಜಮೀನು ತೆಗೆದುಕೊಂಡಿದ್ದಾರೆ. ಮೊದಲು ಜಮೀನು ಕೊಟ್ಟ ರೈತರಿಗೆ ಪ್ರತಿ ಎಕರೆಗೆ 1 ರಂತೆ ಪ್ಲಾಟ್ ಕೊಡುವುದಾಗಿ ಹೇಳಿದ್ದರು. ಅದರಂತೆ ರೈತರಿಂದ ಪಡೆದುಕೊಂಡ ಜಮೀನಿನ ಮಾಲೀಕರಿಗೆ ಮೊದಲು ಜಾಗ ಕೊಡಬೇಕೆಂಬ ನಿಯಮವಿದೆ. ಆದರೆ ಇಲ್ಲಿಯವರೆಗೂ ಪ್ಲಾಟ ಕೊಟ್ಟಿರುವುದಿಲ್ಲ. ಜಮೀನು ನೀಡದ ರೈತರಿಗೆ ಮೊದಲು ಪ್ಲಾಟು ಕೊಡಬೇಕು. ಅಲ್ಲಿಯವರೆಗೂ ಬೇರೆ ಯಾರಿಗೂ ಪ್ಲಾಟ ಹಂಚಿಕೆ ಮಾಡಬಾರದು. ಇಲ್ಲದಿದ್ದರೆ ಜಮೀನು ತೆಗೆದುಕೊಂಡಿದ್ದನ್ನು ಮರಳಿ ರೈತರಿಗೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಲಾಯಿತು.

ದುರ್ಗದಕೇರಿ ಗ್ರಾಮದ ಸಾವಿರಾರು ರೈತರು ತಲಾತಲಾಂತರದಿಂದ ಬಾಳು ಬಿದ್ದ ಜಮೀನುಗಳನ್ನು ಉಳಿಮೆ ಮಾಡುತ್ತಿದ್ದು, ಆದರೆ ಈಗ ಅಧಿಕಾರಿಗಳು ಬಂಡವಾಳ ಶಾಹಿಗಳು ಉದ್ದೇಶಪೂರ್ವಕವಾಗಿ ರೈತರನ್ನು ಒಕ್ಕಲೆಬ್ಬಿಸುವ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ರೈತರನ್ನು ಹೆದರಿಸಿ ಹಿಂದಿನಿಂದಲೂ ಉಳುಮೆ ಮಾಡುತ್ತಿರುವ ಜಮೀನುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಈ ದಬ್ಬಾಳಿಕೆ ನಿಲ್ಲದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.

ಪ್ರತಿಭಟನೆ, ಮನವಿ: ಈ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘದ ಪದಾಧಿಕಾರಿಗಳು ಕೆಲ ಹೊತ್ತು ಧರಣಿ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರಕುಮಾರ, ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಉಪಾಧ್ಯಕ್ಷ ಉಳವಪ್ಪ ಒಡೆಯರ್, ಜಿಲ್ಲಾ ಸಂಘಟನೆ
ಕಾರ್ಯದರ್ಶಿ ಸದಾಶಿವ ಬರಟಗಿ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

Reach Count: 
7