Kshetra Samachara

Local News Subject: 
ಲೋಕಸಭಾ ಚುನಾವಣೆ: ಲೋಪಗಳುಂಟಾಗದಂತೆ ಕ್ರಮ ವಹಿಸಲು ಡಿಸಿ ಸೂಚನೆ
City: 
Hubballi-Dharwad
Gadag
Upload Image: 
Category: 
Politics
Law and Order
Body: 

ಧಾರವಾಡ: ಬರುವ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಯಾವ ಲೋಪಗಳು ಉಂಟಾಗದಂತೆ ಚುನಾವಣಾ ಕರ್ತವ್ಯವನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಲ್ಲಿನ ಕಲಾಭವನದಲ್ಲಿ ಆಯೋಜಿಸಿದ್ದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಸದಸ್ಯರ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಮಾದರಿ ನೀತಿ ಸಂಹಿತೆಯು ಮಾರ್ಚ್ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದ್ದು, ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಿ, ವಿವಿಧ ಸಮಿತಿ, ತಂಡಗಳನ್ನು ರಚಿಸಿ, ಈಗಾಗಲೇ ಆದೇಶ ಹೊರಡಿಸಲಾಗಿದೆ.

ಎಲ್ಲ ಅಧಿಕಾರಿಗಳು ಅಗತ್ಯವಿರುವ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಚುನಾವಣಾ ಆಯೋಗದ ಕಾಯ್ದೆ, ಕಾನೂನು, ನಿಯಮಗಳ ಬಗ್ಗೆ ಸರಿಯಾದ ಅಧ್ಯಯನ ಮಾಡಿ, ಮನದಟ್ಟು ಮಾಡಿಕೊಳ್ಳಬೇಕು. ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳಲ್ಲಿ ತಮಗೆ ಯಾವುದೇ ರೀತಿಯ ಗೊಂದಲ, ಸಂಶಯಗಳಿದ್ದಲ್ಲಿ ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ನೀತಿ ಸಂಹಿತೆ ಉಲ್ಲಂಘನೆಗೆ ಯಾವುದೇ ರೀತಿಯ ಅವಕಾಶ ಆಗದಂತೆ ಎಚ್ಚರಿಕೆಯಿಂದ ಮತ್ತು ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ಎಲ್ಲ ಅಧಿಕಾರಿಗಳು ನಿರ್ವಹಿಸಬೇಕು ಎಂದರು.

ಎಲ್ಲ ತಂಡ, ಸಮಿತಿಗಳ ಸದಸ್ಯರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬಹುದು. ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆ ಹಾಕುವ ಅಥವಾ ಕೇಂದ್ರ ಸ್ಥಾನ ಬಿಡುವ ಮತ್ತು ನಿಧಾನಗತಿ, ವಹಿಸಿದ ಕರ್ತವ್ಯದಲ್ಲಿ ನಿರ್ಲಕ್ಷತೆ ತೋರುವ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ವರದಿ ನೀಡಿ, ಇಲಾಖಾ ತನಿಖೆ ಸೇರಿದಂತೆ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದರು.

ಸೆಕ್ಟರ್ ಆಫೀಸರ್‍ಗಳು ಚುನಾವಣಾ ಆಯೋಗದ ಕಣ್ಣು, ಕಿವಿ ಇದ್ದಂತೆ. ಅವರ ನಿಷ್ಪಕ್ಷಪಾತ, ಪಾರದರ್ಶಕವಾದ ಮತ್ತು ಚುರುಕಾಗಿ ನಿರ್ವಹಿಸುವ ಕರ್ತವ್ಯಗಳಿಂದ ಚುನಾವಣೆ ಹೆಚ್ಚು ಯಶಸ್ವಿಯಾಗಲು ಸಹಾಯವಾಗುತ್ತವೆ. ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ದೂರು, ಮಾಹಿತಿ, ಅಗತ್ಯತೆಗಳನ್ನು ತಿಳಿಯಲು ಭಾರತ ಚುನಾವಣಾ ಆಯೋಗ 1950 ಸಂಖ್ಯೆಯ ಉಚಿತ ಸಹಾಯವಾಣಿ ಆರಂಭಿಸಿದೆ. ಅದು ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಕರೆ ಮಾಡಿ ತಮ್ಮ ಎಪಿಕ್‍ಕಾರ್ಡ್, ಮತದಾರಪಟ್ಟಿ, ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳ ಬಗ್ಗೆ ಮಾಹಿತಿ ನೀಡಬಹುದು. ಅದನ್ನು ಸಂಬಂಧಿತ ತಂಡಗಳಿಗೆ ತಕ್ಷಣ ತಲುಪುವಂತೆ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣೆಗಳನ್ನು ಹೆಚ್ಚು ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಚುನವಣಾ ಆಯೋಗ ಅನೇಕ ಸುಧಾರಣಾ ಕ್ರಮಗಳನ್ನು ಕಾಲಕಾಲಕ್ಕೆ ಜಾರಿ ಮಾಡಿದೆ. ಈ ಸಲದ ಚುನಾವಣೆಯನ್ನು ಮತದಾರಸ್ನೇಹಿ ಮತ್ತು ಮತ್ತಷ್ಟು ಪಾರದರ್ಶಕಗೊಳಿಸಲು ಸಿವಿಜಿಲ್ ಜಾಗೃತ ನಾಗರಿಕ ಆ್ಯಪ್ ಬಿಡುಗಡೆ ಮಾಡಿದೆ. ಈ ಕುರಿತು ಸೆಕ್ಟರ್ ಮೆಜಿಸ್ಟ್ರೇಟ್, ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ, ಫ್ಲಾಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ವೀಕ್ಷಣಾ ತಂಡ ಮತ್ತು ವಿಡಿಯೋ ಸರ್ವೇಲೆನ್ಸ್ ತಂಡಗಳ ಸದಸ್ಯರಿಗೆ ಸದ್ಯದಲ್ಲಿ ಪ್ರತ್ಯೇಕ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆ, ಆಧ್ಯತೆ ಮೇರೆಗೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ, ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು ನೀಡಿರುವ ಸಾಮಾನ್ಯ ನಿರ್ದೇಶನಗಳು ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಅವರು ಮಾತನಾಡಿದರು. ಉಪಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಉಪ ಆಯುಕ್ತ ಅಜಿಜ್ ದೇಸಾಯಿ, ಉಪ ಪೊಲೀಸ್ ಆಯುಕ್ತ ರವೀಂದ್ರ ಗಡಾದಿ ಇದ್ದರು. ತರಬೇತಿ ಕಾರ್ಯಾಗಾರದಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Reach Count: 
1