Kshetra Samachara

Local News Subject: 
ಧಾರವಾಡ ಬಣವಿ ಹಂತಕರು, ಕಲ್ಯಾಣನಗರ ದರೋಡೆಗೂ ಸಾಮ್ಯತೆ ?
City: 
Hubballi-Dharwad
Gadag
Upload Image: 
Category: 
Crime
Body: 

ಧಾರವಾಡ ಕಲ್ಯಾಣ ನಗರದ ಶಿವಾನಂದ ಹೊಂಬಳ ಅವರ ಮನೆಯಲ್ಲಿ ದರೋಡೆ ಹಾಗೂ ಹುಬ್ಬಳ್ಳಿಯ ರಾಜನಗರದ ವೆಂಕಣ್ಣ ಬಣವಿ ಅವರ ಕೊಲೆ ಹಾಗೂ ದರೋಡೆ ಪ್ರಕರಣಗಳ ನಡುವೆ ಸಾಮ್ಯತೆ ಇದ್ದು, ಒಂದೇ ತಂಡದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಎರಡೂ ಘಟನೆಗಳು ನಸುಕಿನ ಜಾವ 3ರಿಂದ 4 ಗಂಟೆ ನಡುವೆ ಸಂಭವಿಸಿವೆ. ಎರಡೂ ಕಡೆ ಕಿಟಕಿ ಗ್ರಿಲ್ ಮುರಿದು ಕಳ್ಳರು ಒಳ ನುಗ್ಗಿದ್ದರು. ಎರಡೂ ಕಡೆ ಕೈ-ಕಾಲು ಕಟ್ಟಿ ಹಾಕಿದ್ದರು, ಎರಡೂ ಕಡೆ ಕಬ್ಬಿಣದ ರಾಡ್ ಹಿಡಿದು ದರೋಡೆ ಮಾಡಿದ್ದಾರೆ. ಹೀಗೆ ಹಲವು ಅಂಶಗಳಲ್ಲಿ ಸಾಮ್ಯತೆ ಕಂಡುಬಂದಿದ್ದರಿಂದ ಎರಡೂ ಪ್ರಕರಣಗಳಲ್ಲಿ ಒಂದೇ ತಂಡದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಚಲನವಲನ ಆಧರಿಸಿ ಬೆಂಗಳೂರು, ಮುಂಬೈ, ಮಧ್ಯಪ್ರದೇಶ, ಹರ್ಯಾಣ ಮತ್ತಿತರೆಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಪ್ರಕರಣ ಭೇದಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ದರೋಡೆಕೋರರು ಇಂಟರ್​ನೆಟ್ ಕಾಲ್ ಮಾಡಿದ್ದರು. ಇದರಿಂದ ಟಾವರ್ ಲೊಕೇಶನ್ ಪತ್ತೆ ಕಷ್ಟವಾಗಿದೆ ಎನ್ನಲಾಗಿದೆ.

ಕಲ್ಯಾಣ ನಗರ ದರೋಡೆ ಪ್ರಕರಣದಲ್ಲಿ ಪ್ರಮುಖ ಸುಳಿವು ದೊರೆತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ರಾಜನಗರ ಬಣವಿ ಹತ್ಯೆ ಪ್ರಕರಣದಲ್ಲೂ ಪ್ರಮುಖ ಮಾಹಿತಿ ಕಲೆ ಹಾಕಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ:ವೃತ್ತಿನಿರತ ಖತರ್ನಾಕ್ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ. ವೆಂಕಣ್ಣ ಬಣವಿ ಅವರ ಕೊಲೆ ಮತ್ತು ದರೋಡೆ ಪ್ರಕರಣದ ಆರೋಪಿಗಳ ಚಲನವಲನಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಅವರ ಮುಖಚರ್ಯು ಗಮನಿಸಿದರೆ ಉತ್ತರ ಭಾರತದವರಂತೆ ಕಾಣುತ್ತಾರೆ. ದರೋಡೆ ವೇಳೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂಬ ಅಂಶ ಅದಕ್ಕೆ ಪುಷ್ಠಿ ನೀಡುತ್ತಿದೆ.

ಪ್ರಕರಣ 1 :ಅಕ್ಟೋಬರ್ 4ರಂದು ನಸುಕಿನ ಜಾವ 3 ಗಂಟೆಗೆ ಧಾರವಾಡ ಕಲ್ಯಾಣ ನಗರದ ಶಿವಾನಂದ ಬಣವಿ ಅವರ ಮನೆಯ ಕಿಟಕಿ ಗ್ರಿಲ್ ಮುರಿದು ಕಳ್ಳರು ನುಗ್ಗಿದ್ದರು. ಬಳಿಕ ಶಿವಾನಂದ ಅವರ ಪತ್ನಿ ಹಾಗೂ ಪುತ್ರಿಯ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 25 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದರು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ 2 : ಜನವರಿ 22ರ ನಸುಕಿನ ಜಾವ ಹುಬ್ಬಳ್ಳಿ ರಾಜನಗರದ ಔಷಧ ವ್ಯಾಪಾರಿ ವೆಂಕಣ್ಣ ಬಣವಿ (72) ಅವರ ಮನೆಯ ಕಿಟಕಿ ಗ್ರಿಲ್ ಕತ್ತರಿಸಿ ನುಗ್ಗಿದ್ದರು. ರೂಮ್ಲ್ಲಿ ಮಲಗಿದ್ದ ವೆಂಕಣ್ಣ- ವನಮಾಲಾ ದಂಪತಿಯ ಕೈ-ಕಾಲು ಮಂಚಕ್ಕೆ ಕಟ್ಟಿ ಹಾಕಿದ್ದರು. ಪ್ರತಿರೋಧ ಒಡ್ಡಿದ್ದ ವೆಂಕಣ್ಣ ಅವರಿಗೆ ರಾಡ್​ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದರು. ಬಳಿಕ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃಪೆ: ವಿ.ವಾ

Reach Count: 
1