Public News

News Subject: 
ಹೃದಯ ಕರಗಿಸುವ ಹುತಾತ್ಮ ಯೋಧರ ಕತೆಗಳು
Upload Image: 
Category: 
Law and Order
Others
Body: 

ಒಬ್ಬರು ಮಗಳ ಮದುವೆಯ ತಯಾರಿಯಲ್ಲಿದ್ದರೆ.. ಮತ್ತೊಬ್ಬರಿಗೆ ಮಗುವಿನ ನಿರೀಕ್ಷೆ... ಮಕ್ಕಳೊಂದಿಗೆ ಸರ್ಕಸ್‌ ನೋಟ... ಸಂಜೆ ಕರೆ ಮಾಡುತ್ತೇನೆಂದವರು ಮಾಡಲೇ ಇಲ್ಲ... ಹೀಗೆ ಹುತಾತ್ಮ ಯೋಧರ ಕುಟಂಬದ ಕತೆಗಳು ನಿಮ್ಮನ್ನು ಆದ್ರ್ರಗೊಳಿಸುತ್ತವೆ.

ನಮ್ಮ ಸುರಕ್ಷೆಗಾಗಿ ತಮ್ಮೆವರನ್ನು ಬಿಟ್ಟು ದೂರದ ಗಡಿಯಲ್ಲಿ ಕಾದಾಡುವ ಯೋಧರ ಕುಟುಂಬದ ನೋವಿನಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ. ಹೃದಯ ಕರಗಿಸುವ ಹುತಾತ್ಮ ಯೋಧರ ಕತೆಗಳು ಇಲ್ಲಿವೆ.....

ಮೂರು ದಿನದ ಹಿಂದೆಯಷ್ಟೇ ಹೋಗಿದ್ದ!

ಉಗ್ರರ ದಾಳಿಗೆ ಬಲಿಯಾದ 40 ಸಿಆರ್‌ಪಿಎಫ್‌ ಯೋಧರ ಪೈಕಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜವಳಿಯ ತಿಲಕ್‌ ರಾಜ್‌, ಮೂರು ದಿನಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. 30 ವರ್ಷದ ತಿಲಕ್‌ ರಾಜ್‌ನ ತಂದೆ-ತಾಯಿಗಳು, ತಮ್ಮ ಮಗನ ಬಲಿದಾನದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ''ನಾವು ಮಗನನ್ನು ಕಳೆದುಕೊಂಡಿದ್ದೇವೆ. ಆದರೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಬೇಕು. ಅದು ಮತ್ತೆ ಇಂಥ ದಾಳಿ ಸಂಘಟಿಸುವ ಸಾಹಸಕ್ಕೆ ಮುಂದಾಗಬಾರದು,'' ಎನ್ನುತ್ತಾರೆ ತಂದೆ ರಾಮ ರಾಮ್‌ ಅವರು. ಯೋಧನ ಶವದ ಆಗಮನಕ್ಕೆ ಇಡೀ ಊರು ಕಾಯುತ್ತಿದೆ.

ನಿವೃತ್ತಿಗೆ ಇನ್ನು ಎರಡು ವರ್ಷವಿತ್ತು

ಕೇರಳದ ವಿ ವಿ ವಸಂತಕುಮಾರ್‌ ಕೂಡ ಉಗ್ರ ದಾಳಿಗೆ ಬಲಿಯಾದವರು. ಆರು ತಿಂಗಳ ಹಿಂದೆಯಷ್ಟೇ ಅವರ ತಂದೆ ವಾಸುದೇವನ್‌ ಮೃತಪಟ್ಟಿದ್ದರು. ಇದೀಗ ವಸಂತ ಕೂಡ ಹುತಾತ್ಮರಾಗಿದ್ದನ್ನು ಅವರ ಕುಟುಂಬ ಅರಗಿಸಿಕೊಳ್ಳಲಾಗುತ್ತಿಲ್ಲ. ''ನನ್ನ ಸಹೋದರ ದೇಶಕ್ಕಾಗಿ ಪ್ರಾಣ ನೀಡಿದ್ದಾನೆ. ನಮಗೆ ಹೆಮ್ಮೆ ಇದೆ'' ಎಂದು ಎಂದು ವಸಂತ್‌ನ ಸಹೋದರ ಸಜೀವನ್‌ ಹೇಳಿದರು. ವಸಂತ್‌ನ ತಾಯಿ ಮತ್ತು ಹೆಂಡತಿ ದುಃಖದ ಮಡುವಿನಲ್ಲಿದ್ದಾರೆ. ಮಕ್ಕಳಾದ ಅಮನದೀಪ್‌(5) ಮತ್ತು ಪುತ್ರಿ ಅನಾಮಿಕಾ(8) ಅವರಿಗೆ ಇನ್ನೂ ಅಪ್ಪ ಮೃತಪಟ್ಟ ವಿಷಯ ಗೊತ್ತಿಲ್ಲ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಐದು ದಿನಗಳ ಕಾಲ ವಂಸತ್‌ ತಮ್ಮ ಕುಟುಂಬದ ಜತೆ ಕಾಲಕಳೆದಿದ್ದರು. ಆಗ ಮಕ್ಕಳನ್ನು, ಕುಟುಂಬದ ಸದಸ್ಯರನ್ನು ಸರ್ಕಸ್‌ಗೆ ಕರೆದುಕೊಂಡು ಹೋಗಿದ್ದರು. 17 ವರ್ಷದಿಂದ ಸೇವೆಯಲ್ಲಿದ್ದ ವಸಂತ್‌ ಅವರು ಇನ್ನೆರಡು ವರ್ಷದಲ್ಲಿ ನಿವೃತ್ತಿಯಾಗಲಿದ್ದರು. ವಯನಾಡ್‌ ಜಿಲ್ಲೆಯ ಲಕ್ಕಿಡಿಯ ಮೂಲದವರಾದ ವಸಂತ್‌ಗೆ ಆರು ತಿಂಗಳ ಹಿಂದೆಯಷ್ಟೇ ಭಡ್ತಿ ದೊರೆತಿತ್ತು.

ಪಂಜಾಬ್‌ನ ಕಲಿಗಳು

ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಪಂಜಾಬ್‌ನಲ್ಲಿ ಶೂರ ಯೋಧರಿಗೆ ಕೊರತೆ ಇಲ್ಲ. ದೇಶಕ್ಕಾಗಿ ಹುತಾತ್ಮರಾಗಲು ಅವರು ಸದಾ ಮುಂದು. ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತರಾದ 40 ಯೋಧರ ಪೈಕಿ ಪಂಜಾಬ್‌ ರಾಜ್ಯದವರು ನಾಲ್ವರಿದ್ದಾರೆ. ಮೋಗಾದ ಜೈಮಲ್‌ ಸಿಂಗ್‌, ಟಾರ್ನ್‌ ತಾರಾನ್‌ ಸಾಹೇಬ್‌ ಜಿಲ್ಲೆಯ ಸುಖ್ಜಿಂದೇರ್‌ ಸಿಂಗ್‌, ಆನಂದಪುರ್‌ ಸಾಹೇಬ್‌ನ ರೌಲಿ ಹಳ್ಳಿಯ ಕುಲ್ವೀಂದೇರ್‌ ಸಿಂಗ್‌, ಗುರುದಾಸಪುರ್‌ನ ಆರ್ಯ ಹಳ್ಳಿಯ ಮಣಿಂದೇರ್‌ ಸಿಂಗ್‌ ಹುತಾತ್ಮ ಯೋಧರು. ಯೋಧರ ಹಳ್ಳಿಗಳಲ್ಲಿ ದುಃಖದ ಕಟ್ಟೆ ಒಡೆದಿತ್ತು. ಸ್ಥಳೀಯರು ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜೈಮಲ್‌ ಸಿಂಗ್‌ ದಾಳಿಗೆ ಒಳಗಾದ ಬಸ್ಸಿನ ಚಾಲಕರಾಗಿದ್ದರು. ಜೈಮಲ್‌ ಮಂಗಳವಾರವಷ್ಟೆ ತನ್ನ ಪತ್ನಿ ಹಾಗೂ ಐದು ವರ್ಷದ ಮಗನ ಜತೆ ಮಾತನಾಡಿದ್ದರು. ಸುಖ್ಜಿಂದೇರ್‌ ಕೂಡ ದೀರ್ಘಾವಧಿಯ ರಜೆಯ ಬಳಿಕ ಇತ್ತೀಚೆಗಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. 26 ವಯಸ್ಸಿನ ಸಿಪಾಯಿ ಕುಲ್ವಿಂದೇರ್‌ ಸಿಂಗ್‌ಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ನವೆಂಬರ್‌ನಲ್ಲಿ ಮದುವೆಗೆ ದಿನ ಗೊತ್ತು ಮಾಡಲಾಗಿತ್ತು.

ಮಗಳ ಮದುವೆಯ ಕನಸು ಕಂಡಿದ್ದರು

ಒಬ್ಬರು ಮಗಳ ಮದುವೆಗೆ ಕಾತರರಾಗಿದ್ದರೆ, ಮತ್ತೊಬ್ಬರು ಎರಡನೇ ಮಗುವಿನ ತಂದೆಯಾಗುವ ನಿರೀಕ್ಷೆಯಲ್ಲಿದ್ದರು. ಹೌದು, ಉಗ್ರರ ದಾಳಿಯಲ್ಲಿ ಮೃತರಾದ ಯೋಧರ ಪೈಕಿ ಬಿಹಾರದ ಇಬ್ಬರು ಯೋಧರಿದ್ದಾರೆ. ಈ ಪೈಕಿ ಸಂಜಯ ಕುಮಾರ್‌ ಸಿನ್ಹಾ ಅವರಿಗೆ ಇಬ್ಬರು ಬೆಳೆದ ಹೆಣ್ಣುಮಕ್ಕಳಿದ್ದಾರೆ. ಮುಂದಿನ ಬಾರಿ ರಜೆಗೆ ಬಂದಾಗ ಹಿರಿಯಳ ಮದುವೆಯನ್ನು ನಿಶ್ಚಯ ಮಾಡಲು ಯೋಜಿಸಿದ್ದರು ಎನ್ನುತ್ತಾರೆ ಅವರ ತಂದೆ ಮಹೇಂದ್ರ ಪ್ರಸಾದ. ಇವರು ಕೂಡ ಸಿಆರ್‌ಪಿಎಫ್‌ ಯೋಧರಾಗಿದ್ದರು. ಭಾಗಲ್ಪುರ ಮೂಲದ ರತನ್‌ ಕುಮಾರ್‌ ಠಾಕೂರ್‌ಗೆ ನಾಲ್ಕು ವರ್ಷದ ಮಗನಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಶ್ರೀನಗರ ತಲುಪಿದ ಬಳಿಕ ಗುರುವಾರ ಸಂಜೆ ಕರೆ ಮಾಡುವುದಾಗಿ ರತನ್‌ ಹೇಳಿದ್ದರು. ಆತನ ಕರೆಯ ನಿರೀಕ್ಷೆಯಲ್ಲಿದ್ದೆವು ಎನ್ನುತ್ತಾರೆ ತಂದೆ ನಿರಂಜನ್‌ ಠಾಕೂರ್‌ ಅವರು.

Reach Count: 
4