ER NEWS

News Subject: 
ಮೀಸಲು ಹೆಚ್ಚಳ ಸಿಎಂ ಭರವಸೆ ಮತ್ತೊಂದು ನಾಟಕ: ಬಿಎಸ್‌ವೈ
Upload Image: 
Body: 

ರಾಜ್ಯದಲ್ಲಿನ ಮೀಸಲು ಪ್ರಮಾಣವನ್ನು ಶೇ.50 ರಿಂದ ಶೇ.70 ಕ್ಕೆ ಹೆಚ್ಚಿಸುವುದಾಗಿ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮತ್ತೊಂದು ದೊಡ್ಡ ನಾಟಕವಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಟುವಾಗಿ ಟೀಕಿಸಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ,''ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳಿಗೆ ಮತ್ತೊಂದು ಟೋಪಿ ಹಾಕಲು ಈ ನಾಟಕ ಮಾಡುತ್ತಿದ್ದಾರೆ. ಮೀಸಲು ಪ್ರಮಾಣ ಶೇ.50 ಮೀರಬಾರದೆಂದು ಸುಪ್ರೀಂಕೋರ್ಟ್‌ ಆದೇಶವಿದ್ದರೂ ಈ ರೀತಿ ಹಸಿ ಸುಳ್ಳುಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ,'' ಎಂದರು.

''ಇಷ್ಟು ದಿನ ಮೀಸಲು ಬಗ್ಗೆ ಮೌನವಾಗಿದ್ದ ಸಿದ್ದರಾಮಯ್ಯ ಈಗ ದಿಢೀರನೇ ಈ ಬಗ್ಗೆ ಮಾತನಾಡತೊಡಗಿದ್ದಾರೆ. ಅಹಿಂದ ವರ್ಗಗಳ ಬಗ್ಗೆ ತುತ್ತೂರಿ ಊದುವ ಸಿಎಂ ಹಾಗೂ ಕಾಂಗ್ರೆಸ್‌ ನಾಯಕರೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಅಡ್ಡಗಾಲು ಹಾಕಿರುವುದು ಏಕೆ ಎಂಬುದರ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು,''ಎಂದು ಯಡಿಯೂರಪ್ಪ ಆಗ್ರಹಿಸಿದರು.''ಹಿಂದುಳಿದ ವರ್ಗಗಳ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕಳೆದ 4 ವರ್ಷಗಳ ಅವಧಿಯಲ್ಲಿ ಈ ವರ್ಗಗಳಿಗೆ ಏನೇನು ಮಾಡಿಲ್ಲ. ಅವರ ಸಾಧನೆಯೆಂದರೆ ಭ್ರಷ್ಟಾಚಾರ, ಲಂಚತನ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರು, ರೈತರ ಆತ್ಮಹತ್ಯೆ ಹೆಚ್ಚಳ ಹಾಗೂ ಬರಗಾಲ ನಿರ್ವಹಣೆಯಲ್ಲಿಯೂ ಸರಕಾರ ವಿಫಲವಾಗಿರುವುದು,'' ಎಂದು ದೂರಿದರು.

ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು ಹಾಗೂ ಹುಲಿನಾಯ್ಕರ್‌ ಅವರು ಉಪಸ್ಥಿತರಿದ್ದರು.

Reach Count: 
1