Public News

News Subject: 
ಉಮೇಶ್‌ ರೆಡ್ಡಿ ಗಲ್ಲು: ಹೈಕೋರ್ಟ್‌ನಲ್ಲಿ ಆ.6ರಿಂದ ಅಂತಿಮ ವಿಚಾರಣೆ
Upload Image: 
Body: 

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಕಾರಾಗೃಹದಲ್ಲಿರುವ ವಿಕೃತಕಾಮಿ ಉಮೇಶ್‌ ರೆಡ್ಡಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಆ.6ರಿಂದ ಅಂತಿಮ ವಿಚಾರಣೆ ಆರಂಭವಾಗಲಿದೆ.

ಗಲ್ಲು ಶಿಕ್ಷೆಗೆ ಗುರಿ ಮಾಡಿರುವುದು ಮತ್ತು ಕ್ಷಮಾದಾನದ ಅರ್ಜಿ ಇತ್ಯರ್ಥ ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ಉಮೇಶ್‌ ರೆಡ್ಡಿ ಅಲಿಯಾಸ್‌ ಬಿ.ಎ.ಉಮೇಶ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ರಾಘವೇಂದ್ರ ಚವ್ಹಾಣ್‌ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದು, ಸೋಮವಾರದಿಂದ ಪ್ರತಿದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.

2016ರ ಅ.20ರಂದು ಹೈಕೋರ್ಟ್‌ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಜಾರಿಗೆ ಮಧ್ಯಾಂತರ ತಡೆ ನೀಡಿದ್ದರಿಂದ ಆತ ಸದ್ಯಕ್ಕೆ ನೇಣು ಕುಣಿಕೆಯಿಂದ ಪಾರಾಗಿದ್ದಾನೆ.

''ಮೊದಲಿಗೆ ರಾಷ್ಟ್ರಪತಿಗಳು ನಿಯಮದ ಪ್ರಕಾರ 90 ದಿನಗಳಲ್ಲಿ ಕ್ಷಮಾದಾನ ಅರ್ಜಿ ಇತ್ಯರ್ಥಪಡಿಸಬೇಕು. ಆದರೆ ಅವರು 830 ದಿನ ತಡವಾಗಿ ಅರ್ಜಿ ವಿಲೇವಾರಿ ಮಾಡಿದ್ದಾರೆ. ಎರಡನೇಯದಾಗಿ, ರೆಡ್ಡಿಯನ್ನು ಕಳೆದ 10 ವರ್ಷಗಳಿಂದ ಏಕಾಂತವಾಸದಲ್ಲಿಡಲಾಗಿದೆ. ಮೂರನೆಯದಾಗಿ, ಆತ ಸತತ 18 ವರ್ಷಗಳಿಂದ ಜೈಲಿನಲ್ಲಿರುವುದರಿಂದ ಮಾನಸಿಕ ಕ್ಷೋಭೆಗೆ ಗುರಿಯಾಗಿದ್ದಾನೆ. ವೈದ್ಯರೂ ಅದನ್ನು ದೃಢಪಡಿಸಿದ್ದಾರೆ''ಎಂಬುದು ಅರ್ಜಿದಾರರ ವಾದವಾಗಿದೆ.

''ಅರ್ಜಿದಾರರು ಇಲ್ಲಿ ಆರೋಪಿಯಾಗಿ ನ್ಯಾಯ ಕೇಳಲು ಬಂದಿಲ್ಲ. ಸಂವಿಧಾನದ 21ನೇ ವಿಧಿ ಅನ್ವಯ ಮೂಲಭೂತ ಹಕ್ಕು ಕೇಳಲು ಬಂದಿದ್ದಾರೆ. ರಾಷ್ಟ್ರಪತಿ ಕ್ಷಮಾದಾನದ ಅರ್ಜಿ ಇತ್ಯರ್ಥಪಡಿಸುವುದು ವಿಳಂಬ ಮಾಡಿದ್ದಾರೆ''ಎಂದು ಅರ್ಜಿಯಲ್ಲಿ ಹೇಳಲಾಗಿದೆ

Reach Count: 
1