Kshetra Samachara

Local News Subject: 
ಪ್ಲಾಸ್ಟಿಕ್ ಬಳಕೆ ಇಂದಿನಿಂದ ಸಂಪೂರ್ಣ ನಿಷೇಧ
City: 
Davangere
Hubballi-Dharwad
Upload Image: 
Body: 

ಮುಂಡಗೋಡ: ತಾಲ್ಲೂಕು ಆಡಳಿತವು ಪ್ಲಾಸ್ಟಿಕ್‌ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ಇಂದಿನಿಂದ (ಆ.1ರಿಂದ) ಪ್ಲಾಸ್ಟಿಕ್‌ ಬಳಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚಿಸಿದೆ. ಪ್ಲಾಸ್ಟಿಕ್‌ ಕೈಚೀಲಗಳು, ಲೋಟ, ಪ್ಲಾಸ್ಟಿಕ್‌ ಹಾಳೆಗಳ ಬಳಕೆ ನಿಷೇಧಿಸಿರುವ ಬಗ್ಗೆ ಪಟ್ಟಣದಲ್ಲಿ ಮಂಗಳವಾರ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಕಿರಾಣಿ ಅಂಗಡಿ, ಬೇಕರಿ, ಹೋಟೆಲ್‌ ಹಾಗೂ ಪಾನ್‌ ಬೀಡಾ ಅಂಗಡಿಗಳಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗಿದೆ.

ದಾಳಿ ವೇಳೆ ನಿಷೇಧಿತ ಪ್ಲಾಸ್ಟಿಕ್‌ ದಾಸ್ತಾನು ಹಾಗೂ ಬಳಕೆ ಕಂಡುಬಂದರೆ ಕಾನೂನು ಕ್ರಮದೊಂದಿಗೆ ದಂಡ ವಿಧಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ವತಿಯಿಂದ ಮಾಹಿತಿ ನೀಡುತ್ತಿರುವುದು ಕಂಡುಬಂತು. ಕಿರಾಣಿ ಅಂಗಡಿಯ ಕೆಲವು ವ್ಯಾಪಾರಸ್ಥರು ತಹಶೀಲ್ದಾರ್‌ ಅಶೋಕ ಗುರಾಣಿ ಅವರನ್ನು ಮಂಗಳವಾರ ಭೇಟಿಯಾದರು.

‘ಅರ್ಧ, ಒಂದು, ಎರಡು ಕೆ.ಜಿ ಬೇಳೆ ಕಾಳುಗಳನ್ನು ಹಾಳೆಯ ಪೊಟ್ಟಣದಲ್ಲಿ ಕಟ್ಟಲು ತೊಂದರೆಯಾಗುತ್ತದೆ. ಇದಕ್ಕೆ ಸ್ವಲ್ಪ ಮಟ್ಟಿಗೆ ರಿಯಾಯ್ತಿ ನೀಡಬೇಕು’ ಎಂದು ಮನವಿ ಮಾಡಿದರು.

ಬಸವನಬೀದಿ, ಸಂತೆ ಮಾರುಕಟ್ಟೆ, ಹುಬ್ಬಳ್ಳಿ ರಸ್ತೆ, ಕಲಾಲ ಓಣಿ, ಟಿಡಿಬಿ ರಸ್ತೆಗಳಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಹಾಗೂ ಬಸ್‌ನಿಲ್ದಾಣ, ಟಿಎಪಿಸಿಎಂಎಸ್‌ ರಸ್ತೆ, ಮೀನು ಮಾರುಕಟ್ಟೆ, ಶಿರಸಿ ರಸ್ತೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಲಿದೆ.

ಯಲ್ಲಾಪುರ ರಸ್ತೆ, ಅಂಬೇಡ್ಕರ್‌ ಓಣಿ, ಬನ್ನಿಕಟ್ಟೆ, ಹಳೂರು ಮಾರ್ಗಗಳಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ನೇತೃತ್ವದ ತಂಡ ಹಾಗೂ ಹೊಂಡದ ಓಣಿ, ಹೊಸ ಓಣಿ, ಕಂಬಾರಗಟ್ಟಿ ಪ್ಲಾಟ್‌, ಬಂಕಾಪುರ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ.

‘ಬುಧವಾರದಿಂದ ಪ್ಲಾಸ್ಟಿಕ್‌ ನಿಷೇಧಿಸಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ದಾಳಿ ನಿರಂತರವಾಗಿ ನಡೆಯಲಿದ್ದು, ಬಳಕೆ ಮಾಡುವುದು ಕಂಡುಬಂದರೆ ದಂಡ ವಿಧಿಸಲಾಗುವುದು. ಸಾರ್ವಜನಿಕರು ಪ್ಲಾಸ್ಟಿಕ್‌ ನಿಷೇಧ ಅಭಿಯಾನಕ್ಕೆ ಸ್ವಯಂಪ್ರೇರಿತರಾಗಿ ಕೈಜೋಡಿಸಿ ಪರಿಸರವನ್ನು ಕಾಪಾಡಬೇಕು’ ಎಂದು ತಹಶೀಲ್ದಾರ್‌ ಅಶೋಕ ಗುರಾಣಿ ಹೇಳಿದರು.

ಸಮಿತಿಗೆ ಸೂಚನೆ: ದಾಳಿ ನಡೆಸಿದಾಗ ವಶಪಡಿಸಿಕೊಳ್ಳುವ ಪ್ಲಾಸ್ಟಿಕ್‌ ಅನ್ನು ಪೊಲೀಸ್‌ ಇಲಾಖೆಗೆ ನೀಡುವುದು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕು. ದಾಳಿ ನಡೆಸಿದ ಬಗ್ಗೆ ಪ್ರತಿ ವಾರ ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸಬೇಕು. ದಂಡದ ರಸೀದಿಯನ್ನು ಆಯಾ ತಂಡದಲ್ಲಿರುವ ಪಟ್ಟಣ ಪಂಚಾಯ್ತಿ ಸಿಬ್ಬಂದಿ ನಿರ್ವಹಿಸಬೇಕು ಎಂದು ಪ್ಲಾಸ್ಟಿಕ್‌ ನಿಷೇಧ ಅನುಷ್ಠಾನ ಸಮಿತಿಯ ಸದಸ್ಯರಿಗೆ ತಿಳಿಸಲಾಗಿದೆ.

40–60 ಕೆ.ಜಿ - ಪ್ರತಿ ದಿನ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ
350ರಿಂದ 500 ಕೆ.ಜಿ - ವಾರದ ಸಂತೆಯಲ್ಲಿ ವಶಪಡಿಸಿಕೊಂಡ ಪ್ಲಾಸ್ಟಿಕ್
800ರಿಂದ 1,000 ಕೆ.ಜಿ - ದಾಳಿಯಲ್ಲಿ ವಶಪಡಿಸಿಕೊಂಡ ಪ್ಲಾಸ್ಟಿಕ್‌

Reach Count: 
1