Public News

News Subject: 
ಅಭಿವೃದ್ಧಿಯ ಕರೆ, ಸೈ ಎಂದ ದೊರೆ
Upload Image: 
Body: 

ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟದ ಹಿನ್ನೆಲೆಯಲ್ಲಿ, ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುವ ಪ್ರಸ್ತಾಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರತ್ಯೇಕ ರಾಜ್ಯ ಬೇಡಿಕೆಯ ಬಿಸಿ ತಣ್ಣಗಾಗಿಸಲು ಮುಂದಾಗಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಉಕ ಭಾಗದ ಸಂಘಟನೆಯ ಮುಖಂಡರ ಜತೆಗೆ ಮಾತುಕತೆ ನಡೆಸಿ, ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವುದಾಗಿ ಮಾಡಿದ್ದ ಘೋಷಣೆಯನ್ನು ಪುನರುಚ್ಚರಿಸಿದ್ದಾರೆ. ಜತೆಗೆ ಪ್ರಮುಖ ಸರಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪ್ರತ್ಯೇಕ ರಾಜ್ಯ ಹೋರಾಟದ ಭಾಗವಾಗಿ ಆ.2ರಂದು ಕರ್ನಾಟಕ ಬಂದ್‌ ಕರೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೋನರೆಡ್ಡಿ ನೇತೃತ್ವದಲ್ಲಿ ಆಗಮಿಸಿದ ಸಂಘಟನಾ ಪ್ರಮುಖರ ಜತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ''ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆಗೆ ಅವಕಾಶ ನೀಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ 70 ವರ್ಷದಿಂದ ದ್ರೋಹವಾಗಿದೆ. ಆದರೆ ನನಗೆ ದೊರೆತ ಈ ಅವಕಾಶವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ. ಮುಂದಿನ 15 ದಿನಗಳ ನಂತರ ಆ ಭಾಗದ ಪ್ರತಿ ಜಿಲ್ಲೆಯಲ್ಲಿ ಎರಡು ದಿನ ವಾಸ್ತವ್ಯ ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸುವರ್ಣಸೌಧ ನಿರ್ಮಾಣಕ್ಕೆ ಚಾಲನೆ ನೀಡಿ, ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವುದಾಗಿ ಘೋಷಿಸಿದ್ದೆ. ಆದರೆ ನಂತರ ಅಧಿಕಾರಕ್ಕೆ ಬಂದವರು ಹತ್ತು ವರ್ಷ ಕಳೆದರೂ ಅನುಷ್ಠಾನ ಮಾಡಿಲ್ಲ. ಈ ವಿಚಾರವೂ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನು ಹದಿನೈದು ದಿನದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ. ಹೋರಾಟಗಾರರ ಮನವೊಲಿಸುತ್ತೇನೆ,'' ಎಂದು ಹೇಳಿದರು.

''ಬೆಳಗಾವಿಯ ಸುವರ್ಣಸೌಧದಲ್ಲಿ ಯಾವುದೇ ಆಡಳಿತಾತ್ಮಕ ಕೆಲಸ ನಡೆಯುತ್ತಿಲ್ಲ. ವರ್ಷಪೂರ್ತಿ ಬೀಗ ಹಾಕಿಡಲಾಗುತ್ತದೆ ಎಂಬ ಕೊರಗು ನಿಮ್ಮಲಿದೆ. ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ಎಲ್ಲ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಬಗ್ಗೆ ನಾನು ಈಗಾಗಲೇ ತೀರ್ಮಾನ ಮಾಡಿದ್ದೇನೆ. ಜನತಾ ದರ್ಶನಕ್ಕೆ ಬರುವ ಹೆಚ್ಚಿನವರು ಉತ್ತರ ಕರ್ನಾಟಕದವರು. ಈ ಹಿನ್ನೆಲೆಯಲ್ಲಿ ಒಬ್ಬರು ಉಪಲೋಕಾಯುಕ್ತರ ಕಚೇರಿಯನ್ನು ಬೆಳಗಾವಿ ಸುವರ್ಣ ಸೌಧಕ್ಕೆ ವರ್ಗಾಯಿಸಲಾಗುವುದು. ಇಬ್ಬರು ಮಾಹಿತಿ ಹಕ್ಕು ಆಯುಕ್ತರನ್ನು ಬೆಳಗಾವಿಗೆ, ಒಬ್ಬರು ಮಾಹಿತಿ ಹಕ್ಕು ಆಯುಕ್ತರನ್ನು ಕಲಬುರ್ಗಿಗೆ ವರ್ಗಾಯಿಸಲಾಗುವುದು. ಅದೇ ರೀತಿ ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ ಸೇರಿದಂತೆ ಆ ಭಾಗಕ್ಕೆ ಸಂಬಂಧಪಟ್ಟ ಎಲ್ಲ ಕಚೇರಿಗಳನ್ನು ಸ್ಥಳಾಂತರಿಸಲಾಗುವುದು,'' ಎಂದು ಭರವಸೆ ನೀಡಿದರು.

ಸಿಎಂ ನೀಡಿದ ಭರವಸೆಗಳೇನು?

-ಸುವರ್ಣಸೌಧದಲ್ಲಿ ಉಪಲೋಕಾಯುಕ್ತರ ಕಚೇರಿ

-ಬೆಳಗಾವಿ, ಕಲಬುರ್ಗಿಗೆ ತಲಾ ಒಬ್ಬರಂತೆ ಇಬ್ಬರು ಮಾಹಿತಿ ಹಕ್ಕು ಆಯುಕ್ತರ ವರ್ಗಾವಣೆ

-ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ ಸೇರಿದಂತೆ ಆ ಭಾಗಕ್ಕೆ ಸಂಬಂಧಪಟ್ಟ ಎಲ್ಲ ಕಚೇರಿಗಳ ಸ್ಥಳಾಂತರ

"ಎರಡನೇ ರಾಜಧಾನಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಮಹಾರಾಷ್ಟ್ರದ ನಾಗ್ಪುರ ಹಾಗೂ ಜಮ್ಮು-ಕಾಶ್ಮೀರದಲ್ಲಿ ಈ ವ್ಯವಸ್ಥೆ ಇದೆ. ಸಂಪುಟದ ಒಪ್ಪಿಗೆ ಪಡೆದು ಘೋಷಣೆ ಮಾಡಬಹುದು. ಕಚೇರಿ ಸ್ಥಳಾಂತರ, ಅಧಿವೇಶನ ನಡೆಸುವುದೆಲ್ಲ ಆಡಳಿತಾತ್ಮಕ ಕ್ರಮಗಳು. ಆದರೆ ಎರಡನೇ ರಾಜಧಾನಿ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂಬ ಬಗ್ಗೆ ವ್ಯಾಪಕವಾದ ಚರ್ಚೆ ನಡೆಸಬೇಕು." --ಚಿರಂಜೀವಿ ಸಿಂಗ್, ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ

"ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಜ್ಯ ವಿಭಜನೆ ಪರಿಹಾರವಲ್ಲ. ಈ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಉತ್ತರ, ದಕ್ಷಿಣ, ಕರಾವಳಿ ಕರ್ನಾಟಕ ಎಂಬ ಭೇದವನ್ನು ನಾನು ಕನಸಿನಲ್ಲೂ ಊಹಿಸಿಲ್ಲ. ನಾನು ನಿಮ್ಮವನು, ನೀವು ನಮ್ಮವರು. ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ." --ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

"ಮುಖ್ಯಮಂತ್ರಿ ಜತೆಗಿನ ಸಭೆ ಆಶಾದಾಯಕವಾಗಿತ್ತು. ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡುವುದೂ ಸೇರಿದಂತೆ ಅನೇಕ ತೀರ್ಮಾನಗಳನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಯೊಳಗಾಗಿ ಬಂದ್‌ ವಾಪಸ್‌ ಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬೇಡಿಕೆ ಈಡೇರದೇ ಇದ್ದರೆ ನ.2ರಂದು ಪ್ರತ್ಯೇಕ ಧ್ವಜ ಹಾರಿಸುವುದು ನಿಶ್ಚಿತ." --ಬಸವರಾಜ ದಿಂಡೂರ, ಪ್ರತ್ಯೇಕ ರಾಜ್ಯ ಹೋರಾಟ ನಾಯಕ

ದೇಶದಲ್ಲಿ ಎಲ್ಲೆಲ್ಲಿ?

-ಜಮ್ಮು ಮತ್ತು ಕಾಶ್ಮೀರವು ಎರಡು ರಾಜಧಾನಿಗಳನ್ನು ಹೊಂದಿದೆ. ಶ್ರೀನಗರದಲ್ಲಿ ಬೇಸಿಗೆ ಹಾಗೂ ಜಮ್ಮುವಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತದೆ. ಶ್ರೀನಗರದಲ್ಲಿ ಭಾರೀ ಮಂಜು ಬೀಳುವುದರಿಂದ ಜಮ್ಮುವಿನಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ.

-ಹಿಮಾಚಲ ಪ್ರದೇಶವು ಶಿಮ್ಲಾ ಹಾಗೂ ಧರ್ಮಶಾಲಾಗಳನ್ನು ರಾಜಧಾನಿಗಳನ್ನಾಗಿ ಮಾಡಿಕೊಂಡಿದೆ.

-ಮಹಾರಾಷ್ಟ್ರವು ಮುಂಬೈನಲ್ಲಿ ಬೇಸಿಗೆ ಹಾಗೂ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ನಡೆಸುತ್ತಿದೆ.

-ಬೆಳಗಾವಿಯಲ್ಲಿ 2006ರಿಂದಲೇ ಅಧಿವೇಶನ ನಡೆಯುತ್ತಿದೆ.

ಉತ್ತರ ಕರ್ನಾಟಕ ಕಡೆಗಣಿಸಿದರೆ ಪ್ರತ್ಯೇಕ ರಾಜ್ಯ ಬೇಡಿಕೆ ಅನಿವಾರ್ಯ

ಬೆಳಗಾವಿ: ಉತ್ತರ ಕರ್ನಾಟಕದ 13 ಜಿಲ್ಲೆಗಳ ಅಭಿವೃದ್ಧಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ಧರಣಿ ನಡೆಸಿದ ನಾನಾ ಮಠಾಧೀಶರು, ಉತ್ತರ ಕರ್ನಾಟಕ ಕುರಿತು ನಿರ್ಲಕ್ಷ್ಯ ಮಾಡಿದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ತಾವೇ ಧ್ವನಿಯಾಗುವುದಾಗಿ ರಾಜ್ಯ ಸರಕಾರಕ್ಕೆ ಮಂಗಳವಾರ ಸ್ಪಷ್ಟ ಎಚ್ಚರಿಕೆ ರವಾನಿಸಿದರು.

ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸುಮಾರು 65 ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಂಡು ದಿಟ್ಟ ಸಂದೇಶ ಸಾರಿದರು. ''ರಾಜ್ಯ ವಿಭಜನೆ ನಮ್ಮ ಹೋರಾಟದ ಉದ್ದೇಶವಲ್ಲ. ಆದರೆ, ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡದೇ ತಾರತಮ್ಯ ಧೋರಣೆ ಅನುಸರಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ. ಅಂಥ ಸಂದರ್ಭವನ್ನು ರಾಜ್ಯ ಸರಕಾರ ಸೃಷ್ಟಿಸಬಾರದು. ಕರ್ನಾಟಕ ಎಂದಿಗೂ ಅಖಂಡವಾಗಿರಬೇಕು,'', ಎಂದು ಸ್ಪಷ್ಟಪಡಿಸಿದರು.

''ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕದ ಶಾಸಕರು, ಸಂಸದರು 'ಬಿಸ್ಕಿಟ್‌ ಬೇಬಿ'ಗಳಾಗಿದ್ದಾರೆ. ಅಭಿವೃದ್ಧಿ ಮಾಡಲಾಗದೆ ಇದ್ದರೆ ಅವರು ರಾಜೀನಾಮೆ ನೀಡಬೇಕು,'' ಎಂದು ಎಂದು ಶಾಸಕರ, ಸಂಸದರ ಕಿವಿ ಹಿಂಡಿದರು. ''ಪ್ರತ್ಯೇಕ ರಾಜ್ಯ ನಡೆಸುವ ತಾಕತ್‌ ಇದೆಯಾ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕದವರು ಎಲ್ಲದಕ್ಕೂ ಸಿದ್ಧ,'' ಎಂದು ಸ್ವಾಮೀಜಿಗಳು ಹೇಳಿದರು. ಸಿಎಂ ಕುಮಾರಸ್ವಾಮಿ ಅವರ ಹೆಸರಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಸಲ್ಲಿಸಲಾಯಿತು. ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರಿಗೂ ಮನವಿ ಪತ್ರ ನೀಡಲಾಯಿತು. ಕೃಷ್ಣಾ 'ಬಿ' ಯೋಜನೆ ಆರಂಭಿಸಬೇಕು ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಶಾಸಕ ಉಮೇಶ್‌ ಕತ್ತಿ ಆಗ್ರಹಿಸಿದರು.

"ಉತ್ತರ ಕರ್ನಾಟಕ ಪ್ರತ್ಯೇಕಿಸುವ ಭಾವನೆ ನಮಗಿಲ್ಲ. ಈ ಭಾಗಕ್ಕೆ ಅನ್ಯಾಯವಾದರೆ ಅದಕ್ಕೆ ರಾಜಕಾರಣಿಗಳೇ ಹೊಣೆಗಾರರು. ಅದಕ್ಕೆ ಅವಕಾಶ ಕೊಡಬಾರದು." -- ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

"ಸಿಎಂ ಅಖಂಡತೆ ಬಿಟ್ಟು ಮಾತನಾಡಬಾರದು. ತೆಲಂಗಾಣವನ್ನು ಕಡೆಗಣಿಸಿದ್ದಕ್ಕೆ ಪ್ರತ್ಯೇಕ ರಾಜ್ಯ ಆಯ್ತು. ಅನಿವಾರ್ಯ ಬಂದರೆ ಉಕ ಪ್ರತ್ಯೇಕ ರಾಜ್ಯ ಆಗಬೇಕಾಗುತ್ತದೆ." -- ಡಾ. ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ

"ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದನದ ಒಳಗೆ, ಹೊರಗೆ ಹೋರಾಟ ನಡೆಸುವೆ. ಆ.2ರ 13 ಜಿಲ್ಲೆಗಳ ಬಂದ್‌ ಕರೆ ಹಿಂಪಡೆಯಬೇಕು." -- ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Reach Count: 
1