Public News

News Subject: 
ಲೋಕಸಭೆಯಲ್ಲಿ ಪ್ರತಿದ್ವನಿಸಿದ ಗುಂಪು ಹಿಂಸೆ, ಹತ್ಯೆ ಪ್ರತಿಧ್ವನಿ : ಕಾಂಗ್ರೆಸ್ ಸಭಾತ್ಯಾಗ
Upload Image: 
Body: 

ಮಕ್ಕಳ ಅಪಹರಣಕಾರರು ಮತ್ತು ಗೋ ಕಳ್ಳರೆಂಬ ವದಂತಿಗಳಿಂದ ದೇಶದ ವಿವಿಧೆಡೆ ಉದ್ರಿಕ್ತ ಗುಂಪುಗಳ ಥಳಿತದಿಂದ ಹಲವರು ಹತ್ಯೆಯಾದ ಪ್ರಕರಣ ಲೋಕಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು ವಾದ-ವಾಗ್ವಾದ ಮತ್ತು ಗದ್ದಲಕ್ಕೆ ಕಾರಣವಾಯಿತು. ಈ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ ಹೇಳಿಕೆಯನ್ನು ಖಂಡಿಸಿ ವಿರೋಧಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿದ ಪ್ರಸಂಗವೂ ನಡೆಯಿತು.

ಲೋಕಸಭೆಯಲ್ಲಿ ಇಂದು ಈ ಕುರಿತು ಹೇಳಿಕೆ ನೀಡಿದ ರಾಜನಾಥ್ ಸಿಂಗ್, ಇಂಥ ಘಟನೆಗಳನ್ನು ತೀವ್ರವಾಗಿ ಖಂಡಿಸಿದರು. ಇಂಥ ಘಟನೆಗಳು ದುರದೃಷ್ಟಕರ. ಇತ್ತೀಚೆಗೆ ಇಂಥ ಘಟನೆಗಳ ಬಗ್ಗೆ ನಾವು ಸೂಚನೆಯನ್ನು ಸಹ ನೀಡಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ವದಂತಿಗಳು ಹಬ್ಬುತ್ತಿರುವುದು ಕೂಡ ಇದಕ್ಕೆ ಕಾರಣ. ಈ ಬಗ್ಗೆ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ನಾವು ಸೋಷಿಯಲ್ ಮೀಡಿಯಾಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಸಾಮಾಜಿಕ ಮಾಧ್ಯಮಗಳು ಇಂಥ ಸುದ್ದಿಗಳು ಮತ್ತು ವದಂತಿಗಳನ್ನು ಖಚಿತಪಡಿಸಿಕೊಂಡು ಸರ್ವೀಸ್ ಪ್ರೊವೈಡರ್‍ಗಳನ್ನು ಬಳಸಬೇಕು. ಈ ಬಗ್ಗೆ ಈಗಾಗಲೇ ನಾವು ಸೂಚನೆಗಳನ್ನು ಕೊಟ್ಟಿದ್ದೇವೆ ಎಂದು ಗೃಹ ಸಚಿವರು ಹೇಳಿದರು. ಕೇಂದ್ರ ಸರ್ಕಾರ ಇಂಥ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ವಿರೋಧ ಪಕ್ಷಗಳು ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿಂಗ್, ಜಾರ್ಖಂಡ್‍ನಲ್ಲಿ ಗುಂಪು ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳಿಗೆ ಹೂವಿನ ಹಾರ ಹಾಕಿದ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಗದ್ದಲದ ವಾತಾವರಣ ಸೃಷ್ಟಿಸಿದ್ದವು.

Reach Count: 
1