Public News

News Subject: 
ಬೊಮ್ಮಾಯಿಗೆ ಸಿ.ಎಂ ಪಟ್ಟ... ಸೋತು ಗೆದ್ದ ಯಡಿಯೂರಪ್ಪ
Upload Image: 
PublicNext--556293--node-nid
Category: 
Politics
Body: 

ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ

ಕೊನೆಗೂ ರಾಜ್ಯದ ಮುಖ್ಯಮಂತ್ರಿ ಸಸ್ಪೆನ್ಸ್ ಗೆ ತೆರೆ ಬಿದ್ದಿದೆ. ತಮ್ಮ ವಿಧೇಯ ಶಿಷ್ಯ, ಲಿಂಗಾಯತ ಸಮುದಾಯದ ( ಸಾದರ ) ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವಲ್ಲಿ ಹಂಗಾಮಿ ಸಿ.ಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಎಲ್ಲ ಬೆಳವಣಿಗೆಯನ್ನು ನೋಡಿದರೆ ಒಂದು ರೀತಿಯಲ್ಲಿ ಯಡಿಯೂರಪ್ಪ ಸೋತು ಗೆದ್ದ ನಾಯಕನಾಗಿ ಬೀಗಿದ್ದಾರೆ ಎನ್ನಬಹುದು. ಒಂದು ದಿ. ಎಸ್.ಆರ್ ಬೊಮ್ಮಾಯಿ ಪುತ್ರ, ಶಿಗ್ಗಾವಿ-ಸವಣೂರ ವಿಧಾನ ಸಭಾ ಕ್ಷೇತ್ರ ಶಾಸಕ ಹಾಗೂ ಗೃಹ ಸಚಿವ ಬಸವರಾಜ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಯಡಿಯೂರಪ್ಪ ರಾಜಿನಾಮೆ ನೀಡುವ ಮುನ್ನವೇ ಬೊಮ್ಮಾಯಿ ಹೆಸರನ್ನು ವರಿಷ್ಠ ಮಂಡಳಿಗೆ ಸೂಚಿಸಿದ್ದರು. ವೀರಶೈವ ಲಿಂಗಾಯತ ಹಾಗೂ ಇತರೆ ಮಠಗಳ ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿಯಾಗಿ ರಾಜಿನಾಮೆಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ನೂತನ ಸಿ.ಎಂ ಲಿಂಗಾಯತ ಸಮುದಾಯದವರೇ ಆಗಬೇಕು ಎಂದು ಪಟ್ಟು ಹಿಡಿದಾಗಲೇ ಬೊಮ್ಮಾಯಿ ಹೆಸರು ಬಹುತೇಕ ಖಚಿತವಾಗಿತ್ತು ಎನ್ನಲಾಗುತ್ತಿದೆ.

ಯಡಿಯೂರಪ್ಪನವರ ನಂತರ ಲಿಂಗಾಯತ ಸಮುದಾಯದವರಿಗೇ ಸಿ.ಎಂ ಹುದ್ದೆ ನೀಡಬೇಕು. ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಅಂತ್ಯ ಖಚಿತ ಎಂಬ ಸಂದೇಶವನ್ನೂ ಮಠಾಧೀಶರ ಸಮಾವೇಶದ ಮೂಲಕ ವರಿಷ್ಠರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಲಿಂಗಾಯತರನ್ನೇ ಸಿ.ಎಂ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ ಮೇಲೆಯೇ ಸ್ವಾಮಿಜಿಗಳ ಪ್ರತಿಭಟನೆ ತಣ್ಣಗಾಗಿತ್ತು.

ಎಲ್ಲ ಲಿಂಗಾಯತ ಮಠಾಧೀಶರು ಒಬ್ಬ ಮುಖ್ಯಮಂತ್ರಿ ಬೆಂಬಲಕ್ಕೆ ನಿಂತಿದ್ದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಮೊದಲು ಎನ್ನಬಹುದು. ಮಠಾಧೀಶರ ನಡೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದ್ದೂ ಉಂಟು.

ಪಕ್ಷ ಭೇದ ಮರೆತು ಲಿಂಗಾಯತ ನಾಯಕರು ಯಡಿಯೂರಪ್ಪಗೆ ಬೆಂಬಲ ನೀಡಿದ್ದು ಗಮನಾರ್ಹ. ಅವರಲ್ಲಿ ಮಾಜಿ ಮಂತ್ರಿ ಹಾಗೂ ಈ ಹಿಂದೆ ಲಿಂಗಾಯತ ಪರ ಹೋರಾಟ ನಡೆಸಿದ್ದ ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಸಹ ಯಡಿಯೂರಪ್ಪಗೆ ಬೆಂಬಲ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಶೇ.17 ರಷ್ಟಿರುವ ವೀರಶೈವ ಲಿಂಗಾಯತ ಹಾಗೂ ಇತರೆ ಒಳಪಂಗಡಗಳ ವಿರೋಧ ಕಟ್ಟಿಕೊಳ್ಳಬಾರದೆಂದು ಯಡಿಯೂರಪ್ಪ ಸೂಚಿಸಿದ ಬಸವರಾಜ್ ಬೊಮ್ಮಾಯಿಗೆ ವರಿಷ್ಠರು ಮಣೆ ಹಾಕಲೇ ಬೇಕಾಯಿತು. ರಾಜ್ಯ 224 ವಿಧಾನಸಭಾ ಕ್ಷೇತ್ರಗಳ ಪೈಕಿ 90 - 100 ಸ್ಥಾನಗಳಲ್ಲಿ ಲಿಂಗಾಯತ ಸಮುದಾಯದ ಪ್ರಭಾವವಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಬಸವರಾಜ್ ಬೊಮ್ಮಾಯಿ ಈ ಹಿಂದೆ ಬೃಹತ್ ನೀರಾವರಿ ಇಲಾಖೆ ನಿರ್ವಹಿಸಿದವರು. ಕರ್ನಾಟಕದ ಭಗೀರಥ ಎಂದೇ ಖ್ಯಾತಿ ಪಡೆದಿದ್ದ ದಿ. ಎಚ್. ಎನ್ ನಂಜೇಗೌಡರ ನಂತರ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಇವರು. ನೀರಾವರಿ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲರು, ಕೋರ್ಟ ಹಂತದಲ್ಲಿರುವ ಯೋಜನೆಗಳ ಸೂಕ್ಷ್ಮತೆ ಅರಿತವರು. ಉತ್ಪ್ರೇಕ್ಷ ಹೇಳಿಕೆ ನೀಡಿ ಎಂದೂ ವಿವಾದ ಹುಟ್ಟು ಹಾಕಿದವರಲ್ಲ.

ಆದರೆ....?

ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು ಎಂಬ ಗಾದೆಯಂತೆ ಸೌಮ್ಯ ಸ್ವಭಾವದ ಬೊಮ್ಮಾಯಿ ಎಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಏಕೆಂದರೆ ವಲಸೆ ಬಂದವರ ಒಂದು ಗುಂಪು, ಈಶ್ವರಪ್ಪ ಅವರಂತಹ ಹಿರಿಯರದೊಂದು ಗುಂಪು, ಇನ್ನೂ ಮಂತ್ರಿಗಳಾಗಬೇಕೆಂಬ ಹಗಲು ಕನಸು ಕಂಡವರ ಮತ್ತೊಂದು ಗುಂಪು ಹೀಗೆ ಎಲ್ಲ ಗುಂಪುಗಳನ್ನು ಸಮಾಧಾನ ಪಡಿಸುವುದು ಬೊಮ್ಮಾಯಿ ಅವರಿಗೆ ದೊಡ್ಡ ಸವಾಲೇ.

ಭೀಷ್ಮ ಪಿತಾಮಹನಂತಿರುವ ಬಿಎಸ್ವೈ ಎಲ್ಲ ಹಂತದಲ್ಲಿ ನೆರವಾಗಬಹುದು, ಆದರೆ ರಿಮೋಟ್ ಕಂಟ್ರೋಲ್ ಆಗಬಾರದು ಅಷ್ಟೇ.

Reach Count: 
32989
Show Detail Screen Advertisement: 
Yes