Public News

News Subject: 
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ಮೋದಿಯನ್ನು ಸನ್ಮಾನಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
Category: 
Politics
Body: 

ಗೋಕಾಕ: "ಪೆಟ್ರೋಲ್ 100 ನಾಟೌಟ್" ಹೋರಾಟದ ಭಾಗವಾಗಿ ಗೋಕಾಕನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ತೈಲ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ವೇಷಧಾರಿಯನ್ನು ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಮಹಿಳಾ ಕಾರ್ಯಕರ್ತರು ಮೋದಿ ವೇಷಧಾರಿಗೆ ಆರುತಿ ಎತ್ತಿ ತಿಲಕ ಹಚ್ಚಿದರು. ತಾಂಬೂಲ ಕೂಡ ನೀಡಲಾಯಿತು. ಮೋದಿಗೆ ಜೈಕಾರ ಕೂಗಿ, ವ್ಯಂಗ್ಯ ಮಾಡಲಾಯಿತು.

ಕಾರ್ಯಕರ್ತರು ಎತ್ತಿನ ಬಂಡಿ ಚಲಾಯಿಸುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿದರು. ಪೆಟ್ರೋಲ್ ಬಂಕ್ ನಲ್ಲಿ ಮೋದಿ ವೇಷಧಾರಿಯಿಂದ ವಾಹನಗಳಿಗೆ ಪೆಟ್ರೋಲ್ ತುಂಬಿಸಲಾಯಿತು. "ಎಲ್ಲಿಗೆ ಬಂತು ಅಚ್ಛೇದಿನ್, ಪೆಟ್ರೋಲ್ ಸೆಂಚುರಿ ಬಾರ್ಸೋವರೆಗೂ ಬಂತು", "ಮೋದಿ ವೈರಸ್" ಸೇರಿ ಇನ್ನಿತರೇ ಬರಹಗಳಿರುವ ಭಿತ್ತಿಪತ್ರಗಳನ್ನು ಹಿಡಿದು, ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಜನಸಾಮಾನ್ಯರು ಧ್ವನಿ ಎತ್ತಬೇಕು:

"ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕೇವಲ ವಾಹನ ಸವಾರರಿಗಷ್ಟೇ ಅಲ್ಲದೇ, ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ತೈಲ ಬೆಲೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿವೆ. ಇದು ಇಡೀ ದೇಶದ ಜನರ ಸಮಸ್ಯೆಯಾಗಿರುವುದರಿಂದ, ಜನರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ಪ್ರತಿಭಟನೆ ಯಶಸ್ವಿಯಾಗಿ, ಸರ್ಕಾರಕ್ಕೆ ಬಿಸಿ ತಟ್ಟುತ್ತದೆ" ಎಂದು ಹೇಳಿದರು.

"ಕಾಂಗ್ರೆಸ್ ನಿಂದ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧೆಡೆಯೂ ಕಾಂಗ್ರೆಸ್ ನಿಂದ ಈಗಾಗಲೇ ಹೋರಾಟ ಮಾಡಲಾಗಿದೆ. ಇಂದು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನಾಳೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುವುದು" ಎಂದು ತಿಳಿಸಿದರು.

ಕೂಡಲೇ ತೈಲ ಬೆಲೆ ಇಳಿಕೆ ಮಾಡಿ:

"ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿವಿಧ ವಲಯಗಳಿಗೂ ತೊಂದರೆಯಾಗಿದೆ. ಹೀಗಾಗಿ, ಕೂಡಲೇ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡಬೇಕು" ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ, ಭಗವಂತ ಹುಳ್ಳಿ, ಕಲ್ಪನಾ ಜೋಶಿ, ಪ್ರವೀಣ ಗುಡ್ಡಾಕಾಯು, ನಜೀರ್ ಶೇಖ್, ಇಮ್ರಾನ್ ತಬಕೀರ್, ರಿಯಾಜ್ ಚೌಗಲಾ, ಶಿವು ಪೂಜಾರಿ, ಬಸವರಾಜ ಸಾಯನ್ನವರ, ಪಾಂಡು ಮನ್ನಿಕೇರಿ, ರಾಹುಲ್ ಬಡೇಸಗೋಳ, ಮಂಜುಳಾ ರಾಮಗಾನಟ್ಟಿ, ಮುನ್ನಾ ಖತೀಬ್, ಇಬಜಲ್ ಖತೀಬ್, ಕಮಲಾ ಕರೆಮ್ಮನ್ನವರ, ಕಲ್ಲಪ್ಪಗೌಡ ಲಕ್ಕಾರ, ಜುಬೇರ ಚೌಗಲಾ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Reach Count: 
32206