Public News

News Subject: 
ಭಾರಿ ಬೆಲೆ ಏರಿಕೆ : ಎಲ್ಲರೂ ಒಟ್ಟಾಗಿ ಮೋದಿ ನೀತಿ ಖಂಡಿಸದ ವಿರೋಧಿಗಳ ವೈಫಲ್ಯವೂ ಕಾರಣ
Upload Image: 
PublicNext-473171-511663-Politics-node
PublicNext-473171-511664-Politics-node
Category: 
Politics
Body: 

ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ

ಡೀಜಲ್, ಪೆಟ್ರೋಲ್ ಬೆಲೆ ಏರಿಕೆ, ಕೃಷಿ ಉತ್ಪಾದನೆ ಕುಸಿತ ಪರಿಣಾಮ ದಿನಸಿ ವಸ್ತುಗಳ ಬೆಲೆ ಶೇ.100 ರಷ್ಟು ಹೆಚ್ಚಳ.

ಕಳೆದೆ ದಸರಾ ದೀಪಾವಳಿಯಿಂದಲೇ ದಿನಸಿ ವಸ್ತುಗಳ ಬೆಲೆ ಹಂತ ಹಂತವಾಗಿ ಏರುತ್ತಲೇ ಬಂದಿವೆ.

ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಮೋದಿ ಸರಕಾರದ ವೈಫಲ್ಯವಲ್ಯ ಎಷ್ಟು ಕಾರಣವೋ, ಕಾಲ ಕಾಲಕ್ಕೆ ಅದನ್ನು ಬಲವಾಗಿ ಖಂಡಿಸುವ, ಸರಕಾರದ ನೀತಿಯನ್ನು ವಿರೋಧಿಸುವ ಶಕ್ತಿ ಕಳೆದುಕೊಂಡಿರುವ, ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳೂ ಕಾರಣ.

ಈಗ ಖಾದ್ಯ ತೈಲ, ಬೇಳೆ ಕಾಳುಗಳು ಹಾಗೂ ಇತರೆ ದಿನಸಿ ವಸ್ತುಗಳ ಬೆಲೆ ಕೊರೊನಾ ನೆಪದಲ್ಲಿ ಶೇ.100 ರಷ್ಟು ಹೆಚ್ಚಳವಾಗಿದೆ, ಆದರೆ ಅದನ್ನುಅಧಿಕಾರಯುತವಾಗಿ ಪ್ರಶ್ನಿಸುವ ಧೈರ್ಯ ಯಾವ ಪಕ್ಷಕ್ಕೂ ಇಲ್ಲದಂತಾಗಿರುವುದು ದೇಶದ ದುರ್ದೈವ.

ಪ್ರತಿ ಲೀಟರ್ ಗೆ 95 ರೂ ಇದ್ದ ರಿಫೈನ್ಡ್ ಅಡುಗೆ ಎಣ್ಣೆ ಇಂದು 175 ರಿಂದ 190 ತಲುಪಿದೆ. ಎಂಆರ್ಪಿ 200 ರೂ ಇದ್ದರೂ ಗ್ರಾಹಕರನ್ನು ಕಳೆದುಕೊಳ್ಳಬಾರದೆಂದು ಕಡಿಮೆ ಲಾಭವಾದರೂ ಚಿಂತೆ ಇಲ್ಲವೆಂದು ಅಂಗಡಿಕಾರರು 170-180 ರೂಗಳಿಗೆ ಮಾರುತ್ತಿದ್ದಾರೆ.

ಅದೇ ರೀತಿ ಬೇಳೆಕಾಳುಗಳ ಬೆಲೆ ಶೇ.40 ರಿಂದ 50 ರಷ್ಟು ಹಾಗೂ ಚಹಪುಡಿ, ಸಕ್ಕರೆ ಬೆಲ್ಲದ ದರದಲ್ಲಿ ಶೇ. 30 ರಷ್ಟು ಹೆಚ್ಚಳವಾಗಿದೆ. ತರಕಾರಿ ಬೆಲೆಗಳನ್ನಂತೂ ಕೇಳವುಂತಿಲ್ಲ.

ಯುಪಿಎ ಸರಕಾರದಲ್ಲಿ ಸಿಲಿಂಡರ್, ಪೆಟ್ರೋಲ್ ಡೀಜಲ್ , ಅಥವಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದಾಗ ನಿತ್ಯ ಬೀದಿ ರಂಪ ಮಾಡುತ್ತಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರು ಈಗ ಗಂಟಲಲ್ಲಿ ಕಡಬು ಸಿಕ್ಕಿದವರ ಹಾಗೆ ಮುಚ್ಚಿಕೊಂಡು ಕುಳಿತಿದ್ದಾರೆ. ಜನಪರ ಕಾಳಜಿ ಇದ್ದರೆ ಈಗಲೂ ವಿರೋಧಿಸಬಹುದಲ್ಲ.

ಇವರು ಬಿಡಿ ಈಗ ತಮ್ಮ ಪಕ್ಷ ಅಧಿಕಾರದಲ್ಲಿದೆ. ಹೀಗಾಗಿ ಎಲ್ಲವನ್ನು ಸಹಿಸಿಕೊಳ್ಳಲೇ ಬೇಕಾಗಿದೆ.

ಆದರೆ ಕೇವಲ ಮುಖ್ಯಮಂತ್ರಿ, ಪ್ರಧಾನಿ ಕನಸನ್ನು ಕಾಣುವ ಈ ಕಾಂಗ್ರೆಸ್ಸಿಗರಿಗೇನು ಆಗಿದೆ ಧಾಡಿ. ಇವರ ಪಾಖಂಡಿತನ ನೋಡಿದಾಗ ದೇಶದಲ್ಲಿ ಅಥವಾ ರಾಜ್ಯದಲ್ಲಿ ವಿರೋಧ ಪಕ್ಷವೆಂಬುದು ಇದೆಯೇ? ಎಂಬ ಸಂಶಯವುಂಟಾಗುತ್ತಿದೆ.

ಕೊರೊನಾ ವ್ಯಾಕ್ಸಿನ್ ಉತ್ಪಾದನೆಯಲ್ಲಿಯೋ ಅಥವಾ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿಯೋ ಎಡಬಿಡಂಗಿ ಹೇಳಿಕೆ ನೀಡುವುದನ್ನು ಬಿಟ್ಟರೆ ಕಾಂಗ್ರೆಸ್ ಎಂದಾದರೂ ಬಿಜೆಪಿ ಸರಕಾರದ ಜನವಿರೋಧ ನೀತಿಗಳನ್ನು ಗಟ್ಟಿಯಾಗಿ ಪ್ರಶ್ನಿಸುವ ಸಾಹಸ ಮಾಡಿದೆಯೇ?

ಖಂಡಿತ ಇಲ್ಲ. ಕೃಷಿ ಕಾನೂನು ವಿರೋಧಿಸಿ ರೈತ ಮುಖಂಡರು ಹೋರಾಟ ಮಾಡಿದಾಗ ಅವರೊಂದಿಗೆ ಜೈ ಹೇಳುವುದು, ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಮೋದಿ ಸೋಲಿಸಿದಾಗ ( ತಾನು ಸೋತು ಮಣ್ಣು ಮುಕ್ಕಿದ್ದರೂ) ಸಂಭ್ರಮ ಪಡುವುದನ್ನು ಬಿಟ್ಟರೆ ಕಾಂಗ್ರೆಸ್ ಸಾಧಿಸಿದ್ದೇನು ಇಲ್ಲ.

ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಲೇ ಬಂದಿವೆ. ಈಗ ಎಚ್ಚೆತ್ತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಅದೂ ಪತ್ರಿಕೆ/ಟಿವಿಗಳಲ್ಲಿ ಮೋದಿ ವಿರುದ್ಧ ಭಾಷಣಕ್ಕೆ ಸೀಮಿತವಾಗಬಾರದು. ಇತರೆ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದವರಿಸಲೇ ಬೇಕು.

ತೈಲದ ಮೇಲಿನ ಅಬಕಾರಿ ಸುಂಕ ತೆಗೆದು ಪೆಟ್ರೋಲ್ ಡೀಜಲ್ ಬೆಲೆ ಇಳಿಸಲು ಹಾಗೂ ಖಾತ್ಯ ತೈಲ ಆಮದು ಮಾಡಿಳ್ಳಲು ಮೋದಿ ಸರಕಾರವನ್ನು ಒತ್ತಾಯಿಸಬೇಕು.

ಇಲ್ಲವಾದರೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳಿಗೆ ನೀವೂ ಪಾಲುದಾರರಾಗಬೇಕಾದೀತು?

Reach Count: 
41887