ER NEWS

News Subject: 
ಸೌರಮಂಡಲದಲ್ಲಿ 9ನೇ ಗ್ರಹದ ಇರುವಿಕೆಗೆ ಹಲವು ಪುರಾವೆ: ನಾಸಾ
Upload Image: 
Body: 

ಸೌರಮಂಡಲದಲ್ಲಿ ಈವರೆಗೂ ಕಾಣದಿರುವ ಒಂಬತ್ತನೇ ಗ್ರಹದ ಇರುವಿಕೆ ಕುರಿತು ನಾಸಾ ವಿಜ್ಞಾನಿಗಳು ವಿವರಿಸಿದ್ದಾರೆ. ಭೂಮಿಗಿಂತ 10ಪಟ್ಟು ಹೆಚ್ಚು ದ್ರವ್ಯರಾಶಿ ಹಾಗೂ ಸೂರ್ಯನಿಂದ ನೆಪ್ಚೂನ್‌ ದೂರಕ್ಕಿಂತಲೂ 20ಪಟ್ಟು ಹೆಚ್ಚು ಅಂತರದಲ್ಲಿ ಇರಬಹುದು ಎಂದಿದ್ದಾರೆ. ಯುರೇನಸ್‌ ಹಾಗೂ ನೆಪ್ಚೂನ್‌ಗಳಿಗಿಂತ ಕಡಿಮೆ ದ್ರವ್ಯರಾಶಿ ಹೊಂದಿರುವ ಒಂಬತ್ತನೇ ಗ್ರಹವೇ ಸೌರಮಂಡಲದಲ್ಲಿ ಕಾಣದಿರುವ ‘ಮಹಾಪೃಥ್ವಿ’ ಆಗಿರಬಹುದೆಂದು ಊಹಿಸಲಾಗಿದೆ.

ಐದು ಭಿನ್ನ ಗ್ರಹಿಕೆಗಳು ಒಂಬತ್ತನೇ ಗ್ರಹದ ಇರುವಿಕೆಗೆ ಪುರಾವೆ ಒದಗಿಸುತ್ತವೆ. ಅಂಥದ್ದೊಂದು ಗ್ರಹ ಇಲ್ಲವೆಂದು ಸಾಬೀತು ಪಡಿಸಬೇಕಾದರೆ, ಐದು ಭಿನ್ನ ಸಿದ್ಧಾಂತಗಳನ್ನು ರೂಪಿಸಬೇಕಾಗುತ್ತದೆ. ಇದರಿಂದ ಸಮಸ್ಯೆ ಮತ್ತಷ್ಟು ಸಂಕೀರ್ಣಗೊಳ್ಳುತ್ತದೆ ಎನ್ನುತ್ತಾರೆ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಖಭೌತಶಾಸ್ತ್ರಜ್ಞ ಕೊಂಸ್ಟಾನ್ಟಿನ್‌ ಬ್ಯಾಟಿಜಿನ್‌.

ನೆಪ್ಚೂನ್‌ ಗ್ರಹದಿಂದ ಒಂದು ಹಂತ ಹೊರಗಿನ ಕ್ಯೂಪರ್‌ ಬೆಲ್ಟ್‌ನಲ್ಲಿ ಸುತ್ತುತ್ತಿರುವ ಆರು ಕಾಯಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಈ ಎಲ್ಲವೂ ದೀರ್ಘ ವೃತ್ತಾಕಾರದಲ್ಲಿ ಒಂದೇ ದಿಕ್ಕಿನತ್ತ ಸುತ್ತುತ್ತಿವೆ. ಅಧಿಕೃತವಾಗಿ ಪಟ್ಟಿಯಾಗಿರುವ 8 ಗ್ರಹಗಳು ಸುತ್ತುವ ಸೂರ್ಯ ಪಥದ ರೇಖೆಗಿಂತ 30 ಡಿಗ್ರಿಯಷ್ಟು ಕೆಳಗೆ ಬಾಗಿದೆ.

ಈ ವಲಯದಲ್ಲಿರುವ ಒಂಬತ್ತನೇ ಗ್ರಹದ ಪರಿಣಾಮದಿಂದಲೇ ಸೌರಮಂಡಲದ ಸೂರ್ಯನನ್ನು ಸುತ್ತುವ ಇತರೆ 8 ಗ್ರಹಗಳು ಸೌರಮಧ್ಯರೇಖೆಗಿಂತ 6 ಡಿಗ್ರಿಯಷ್ಟು ಬಾಗಿರುವುದಾಗಿ ಖಗೋಳಶಾಸ್ತ್ರಜ್ಞರ ತಂಡ ವಿವರಿಸಿದೆ. ಮಿಥೇನ್‌, ಅಮೋನಿಯ ಹಾಗೂ ನೀರಿನ ಕಣಗಳನ್ನು ಈ ಬೆಲ್ಟ್‌ ಒಳಗೊಂಡಿದೆ. ಬಾಹ್ಯಾಕಾಶ ವಿಜ್ಞಾನಿಗಳು ಕ್ಯೂಪರ್‌ ಬೆಲ್ಟ್‌ ಅನ್ನು ಗ್ರಹ ವಿನ್ಯಾಸದ ಮಾಹಿತಿಯ ಚಿನ್ನದ ಗಣಿ ಎಂದೇ ಪರಿಗಣಿಸಿ ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Reach Count: 
1