ER NEWS

News Subject: 
ಚಿಕಿತ್ಸೆ ನೀಡಲು 15 ದಿನಗಳಿಗೊಮ್ಮೆ ಜೈಲು ಭೇಟಿ: ದಂತವೈದ್ಯರಾದ ತಲ್ವಾರ್‌ ದಂಪತಿ ಭರವಸೆ
Upload Image: 
Body: 

ವೃತ್ತಿಯಲ್ಲಿ ದಂತವೈದ್ಯರಾಗಿರುವ ರಾಜೇಶ್‌ ಮತ್ತು ನೂಪುರ್ ತಲ್ವಾರ್‌ ದಂಪತಿ ಜೈಲಿನಿಂದ ಬಿಡುಗಡೆಯಾದ ನಂತರ ಪ್ರತಿ 15 ದಿನಗಳಿಗೊಮ್ಮೆ ದಾಸ್ನಾ ಕಾರಾಗೃಹ ಭೇಟಿ ಮಾಡಿ, ಹಲ್ಲಿನ ಸಮಸ್ಯೆಗಳಿರುವ ಕೈದಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

9 ವರ್ಷಗಳ ಹಿಂದೆ ನೊಯಿಡಾದಲ್ಲಿ ನಡೆದಿದ್ದ ಆರುಷಿ–ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ಗೆ ಸಿಬಿಐ ವಿಶೇಷ ನ್ಯಾಯಾಲಯ 2013ರಲ್ಲಿ ಜೀವವಾಧಿ ಶಿಕ್ಷೆ ವಿಧಿಸಿತ್ತು. 2013ರ ನವೆಂಬರ್‌ನಿಂದ ಈ ದಂಪತಿಗಳನ್ನು ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ಇರಿಸಲಾಗಿದೆ. ಆರುಷಿ ಮತ್ತು ಹೇಮರಾಜ್‌ ಹತ್ಯೆ ಪ್ರಕರಣದಲ್ಲಿ ತಲ್ವಾರ್‌ ದಂಪತಿಗಳನ್ನು ಅಲಹಾಬಾದ್‌ ಹೈಕೋರ್ಟ್‌ ಗುರುವಾರ ಖುಲಾಸೆಗೊಳಿಸಿದ್ದು, ದಾಸ್ನಾ ಜೈಲಿನಿಂದ ದಂಪತಿಗಳು ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿಷ್ಕ್ರಿಯಗೊಂಡಿದ್ದ ಕಾರಾಗೃಹ ಆಸ್ಪತ್ರೆಯಲ್ಲಿನ ದಂತಚಿಕಿತ್ಸಾ ವಿಭಾಗದ ಪುನರಾರಂಭ ಕಾರ್ಯದಲ್ಲಿ ತಲ್ವಾರ್‌ ದಂಪತಿಗಳು ಶ್ರಮಿಸಿದ್ದಾರೆ. ಜೈಲು ಸಿಬ್ಬಂದಿ, ಪೊಲೀಸರು ಹಾಗೂ ಅವರ ಮಕ್ಕಳು ಸೇರಿದಂತೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಅವರ ಬಿಡುಗಡೆಯ ನಂತರವೂ 15 ದಿನಗಳಿಗೊಮ್ಮೆ ಕೈದಿಗಳಿಗೆ ಚಿಕಿತ್ಸೆ ನೀಡಲು ಬರುವುದಾಗಿ ಭರವಸೆ ನೀಡಿರುವುದಾಗಿ ಕಾರಾಗೃಹದ ವೈದ್ಯ ಸುನಿಲ್‌ ತ್ಯಾಗಿ ಹೇಳಿದ್ದಾರೆ.

Reach Count: 
1